Home News ‘ನಿಮ್ಮ ಸಲಹೆ – ನಮ್ಮ ಭರವಸೆ’

‘ನಿಮ್ಮ ಸಲಹೆ – ನಮ್ಮ ಭರವಸೆ’

0

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಗೆಲ್ಲುವುದು ಖಚಿತ. ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯುವುದು ಶತಸಿದ್ದ ಎಂದು ಬಿಜೆಪಿ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಜ್ಯೋತಿರೆಡ್ಡಿ ತಿಳಿಸಿದರು.
ನಗರದ ಚಿಂತಾಮಣಿ ರಸ್ತೆಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಭಾನುವಾರ ನವಭಾರತಕ್ಕಾಗಿ ನವಕರ್ನಾಟಕ ಜನಪರ ಶಕ್ತಿ ಅಡಿಯಲ್ಲಿ ಆಯೋಜಿಸಲಾಗಿದ್ದ ‘ನಿಮ್ಮ ಸಲಹೆ – ನಮ್ಮ ಭರವಸೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷ ರಾಜ್ಯದಲ್ಲಿ ೧೫೦ ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಿ ಅಧಿಕಾರ ಹಿಡಿಯಲು ಈಗಿಂದಲೇ ಕಾರ್ಯಕರ್ತರು ಮತ್ತು ಮುಖಂಡರು ಕಾರ್ಯಪ್ರವೃತ್ತರಾಗಬೇಕು. ಕಳೆದ ಮೂರೂವರೆ ವರ್ಷದ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಜನರ ಬಳಿ ತೆರಳಬೇಕು ಎಂದರು.
ಕ್ಷೇತ್ರದ ಸ್ಥಳೀಯ ಸಮಸ್ಯೆಗಳು ಹಾಗೂ ಸಲಹೆಗಳನ್ನು ಸಂಗ್ರಹಿಸಿ ಪ್ರಣಾಳಿಕೆ ರಚಿಸಲು ನವಭಾರತಕ್ಕಾಗಿ ನವಕರ್ನಾಟಕ ಜನಪರ ಶಕ್ತಿ ಕಾರ್ಯಕ್ರಮ ಆಯೋಜಿಸಲಾಗಿದ್ದು ಇಲ್ಲಿನ ಸ್ಥಳೀಯ ಕಸಬುಗಳಾದ ರೇಷ್ಮೆ ಹಾಗು ಹೈನುಗಾರಿಕೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ನಾಗರಿಕರೂ, ಕಾರ್ಯಕರ್ತರು, ಮುಖಂಡರಿಂದ ಸಲಹೆ ಸೂಚನೆಗಳನ್ನು ಸಂಗ್ರಹಿಸಿ ರಾಜ್ಯ ಹಾಗೂ ಕೇಂದ್ರಕ್ಕೆ ಕಳುಹಿಸಲಾಗುವುದು ಎಂದರು.
ಬಿಜೆಪಿ ತಾಲ್ಲೂಕು ಮಂಡಲ ಅಧ್ಯಕ್ಷ ಬಿ.ಸಿ.ನಂದೀಶ್ ಮಾತನಾಡಿ, ಕಳೆದ ಎಪ್ಪತ್ತು ವರ್ಷಗಳ ಕಾಲ ದೇಶವನ್ನಾಳಿದ ವಿವಿಧ ರಾಜಕೀಯ ಪಕ್ಷಗಳು ದೇಶದ ಸಾಮಾನ್ಯ ಜನರ ಪರ ಆಡಳಿತ ನಡೆಸಲಿಲ್ಲ. ಹಾಗಾಗಿ ಇಂದಿಗೂ ದೇಶದ ಬಹುತೇಕ ಭಾಗಗಳಲ್ಲಿ ಮೂಲಭೂತ ಸವಲತ್ತುಗಳಿಲ್ಲದೇ ಪರದಾಡುವಂತಾಗಿದೆ. ಕಳೆದ ಮೂರೂವರೆ ವರ್ಷದ ನರೇಂದ್ರಮೋದಿ ಸಾಧನೆ ದೇಶಾದ್ಯಂತ ಜನರ ಮನಸ್ಸಿನಲ್ಲಿದ್ದು ಮುಂಬರುವ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದರು.
ಇದೇ ಸಂದರ್ಭದಲ್ಲಿ ಸಭೆಯಲ್ಲಿ ಸೇರಿದ್ದ ಕಾರ್ಯಕರ್ತರೂ ಸೇರಿದಂತೆ ನಾಗರಿಕರು ಸ್ಥಳೀಯ ಸಮಸ್ಯೆಗಳು ಹಾಗೂ ಸಲಹೆಗಳನ್ನು ಬರೆದು ಕಚೇರಿಯಲ್ಲಿಟ್ಟಿದ್ದ ಪೆಟ್ಟಿಗೆಯೊಳಕ್ಕೆ ಹಾಕಿದರು.
ಬಿಜೆಪಿ ಮುಖಂಡರಾದ ಡಿ.ಆರ್.ಶಿವಕುಮಾರಗೌಡ, ನಾರ್ತ್ ಈಸ್ಟ್ ಪ್ರಾಪರ್ಟೀಸ್ನ ಸುರೇಶ್, ಸುರೇಂದ್ರಗೌಡ, ನಗರಸಭೆ ಸದಸ್ಯ ಎಸ್.ರಾಘವೇಂದ್ರ, ದಾಮೋಧರ್ ಹಾಜರಿದ್ದರು.

error: Content is protected !!