Home News ನಿರುದ್ಯೋಗ ಯುವಕ, ಯುವತಿಯರಿಗೆ ಉಚಿತ ಕೌಶಲ್ಯ ತರಬೇತಿ

ನಿರುದ್ಯೋಗ ಯುವಕ, ಯುವತಿಯರಿಗೆ ಉಚಿತ ಕೌಶಲ್ಯ ತರಬೇತಿ

0

ತಾಲ್ಲೂಕಿನ ನಿರುದ್ಯೋಗ ಯುವಕ,ಯುವತಿಯರ ಭವಿಷ್ಯವನ್ನು ಉಜ್ವಲಗೊಳಿಸುವ ಉದ್ದೇಶದಿಂದ ಎಸ್.ಎನ್.ಕ್ರಿಯಾ ಟ್ರಸ್ಟ್ ಮೂಲಕ ದಿ.ನಡ್ಜ್ ಪೌಂಡೇಷನ್ ಬೆಂಗಳೂರು ಇವರ ಸಹಯೋಗದಲ್ಲಿ ನಂದನ್ ನೀಲಕೇಣಿ ಮತ್ತು ಟಾಟಾ ಟ್ರಸ್ಟ್ ನ ಸಹಕಾರದಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಅಂಗವಾಗಿ ಯುವ ಸಬಲೀಕರಣ ಕಾರ್ಯಕ್ರಮದಡಿಯಲ್ಲಿ ಕೌಶಲ್ಯಯುತ ೧೦೦ ದಿನಗಳ ತರಬೇತಿಯನ್ನು ಉಚಿತವಾಗಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಎಸ್.ಎನ್.ಕ್ರಿಯಾ ಟ್ರಸ್ಟಿನ ಅಧ್ಯಕ್ಷ ಆಂಜಿನಪ್ಪ(ಪುಟ್ಟು) ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯುವ ಸಬಲೀಕರಣ’ ಕಾರ್ಯಕ್ರಮವನ್ನು ತಾಲ್ಲೂಕಿನ ವರದನಾಯಕನಹಳ್ಳಿ ಗೇಟ್‌ ಬಳಿಯ ಬಾಲಾಜಿ ಕಲ್ಯಾಣಮಂಟಪದಲ್ಲಿ ಜನವರಿ 13 ರ ಶುಕ್ರವಾರದಂದು ನಡೆಸಲಾಗುವುದು. ಬಡಜನರ ಜೀವನ ಮಟ್ಟ ಸುಧಾರಣೆ, ಹಾಗೂ ಆರ್ಥಿಕ ಸ್ವಾವಲಂಬನೆ ಸಾಧಿಸಲು ಯುವ ಸಬಲೀಕರಣದೊಂದಿಗೆ ಸದೃಢ ಸಮಾಜದ ಆಶಯವನ್ನು ಇಟ್ಟುಕೊಂಡು ಬೆಂಗಳೂರಿನ ಕಾಡುಗೋಡಿಯಲ್ಲಿ ಉಚಿತ ಊಟ, ವಸತಿ ಸಹಿತ ೧೦೦ ದಿನಗಳ ತರಬೇತಿ ನೀಡಲಾಗುತ್ತದೆ. ಈ ತರಬೇತಿಯಲ್ಲಿ ೧೮ ರಿಂದ ೩೫ ವರ್ಷದೊಳಗಿನ ಅವಿದ್ಯಾವಂತ ಅಥವಾ ಪಿಯುಸಿ ಓದಿರುವ ನಿರುದ್ಯೋಗಿ ಯುವಕ,ಯುವತಿಯರು ಭಾಗವಹಿಸಬಹುದಾಗಿದೆ. ವಾಹನ ಚಾಲನ ತರಬೇತಿ(ಪುರುಷರು), ಬ್ಯೂಟಿಷಿಯನ್ (ಮಹಿಳೆಯರು) ಡಾಟಾ ಎಂಟ್ರಿ, ಕಂಪ್ಯೂಟರ್, ಉತ್ತಮ ಕೌಶಲ್ಯಯುತ ಜೀವನ ಶೈಲಿ, ವ್ಯಕ್ತಿತ್ವ ವಿಕಸನ, ಆರ್ಥಿಕ ವ್ಯವಹಾರ ಜ್ಞಾನ, ಯೋಗ ಮುಂತಾದ ತರಬೇತಿಗಳನ್ನು ನೀಡಲಾಗುತ್ತದೆ. ಮೂಲ ನೋಂದಾವಣಿ ಶುಲ್ಕ ಒಬ್ಬ ಅಭ್ಯರ್ಥಿಗೆ ೫೦೦ ಗಳನ್ನು ಎಸ್.ಎನ್.ಕ್ರಿಯಾ ಟ್ರಸ್ಟ್ ಭರಿಸಲಿದೆ ಎಂದರು.
ನಡ್ಜ್ ಸಂಸ್ಥೆಯ ಅಧಿಕಾರಿ ಜೈಕರ್ ಮಾತನಾಡಿ, ವಾಹನ ಚಾಲನಾ ತರಬೇತಿ ಪಡೆಯುವವರು ಹಾಗೂ ಬ್ಯೂಟಿಷಿಯನ್‌ಗೆ ಯಾವುದೇ ವಿದ್ಯಾರ್ಹತೆ ಅಗತ್ಯವಿಲ್ಲ. ಡಾಟಾ ಎಂಟ್ರಿಗೆ ದ್ವೀತಿಯ ಪಿ.ಯು.ಸಿ. ಕಡ್ಡಾಯವಾಗಿರುತ್ತದೆ. ಪಾಸ್ ಪೋರ್ಟ್ ಅಳತೆಯ ೩ ಭಾವಚಿತ್ರ, ಚುನಾವಣಾ ಗುರುತಿನ ಚೀಟಿ, ಆಧಾರ್ ಕಾರ್ಡ್, ಶಾಲಾ ವರ್ಗಾವಣೆ ಪತ್ರ, ವಯಸ್ಸಿನ ದೃಡೀಕರಣ ಪತ್ರ ನೀಡಬೇಕಾಗುತ್ತದೆ. ಒಂದು ತರಬೇತಿ ತಂಡದಲ್ಲಿ ೬೫ ಮಂದಿ ಇರುತ್ತಾರೆ. ಯುವಕರು, ಹಾಗೂ ಯುವತಿಯರಿಗೆ ಪ್ರತ್ಯೇಕವಾದ ವಸತಿ ಸೌಲಭ್ಯ ಕಲ್ಪಿಸಲಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ೦೮೧೫೮೨೫೫೪೪೦, ೯೯೦೦೮೨೨೧೮೮, ೯೮೪೫೩೬೬೪೦೭ ಗೆ ಸಂಪರ್ಕಿಸಬಹುದಾಗಿದೆ ಎಂದರು.
ಉಚಿತ ಆರೋಗ್ಯ ತಪಾಸಣಾ ಶಿಬಿರ : ಎಸ್.ಎನ್.ಕ್ರಿಯಾ ಟ್ರಸ್ಟ್ ವತಿಯಿಂದ ಎಂ.ವಿ.ಜೆ.ಹಾಸ್ಪಿಟಲ್, ಹೊಸಕೋಟೆ, ಇವರ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ೧೭ ನೇ ಜನವರಿ ೨೦೧೭ ರಂದು ಬೆಳಿಗ್ಗೆ ೯ ಗಂಟೆಯಿಂದ ಮಧ್ಯಾಹ್ನ ೩ ಗಂಟೆಯವರೆಗೂ ತಾಲ್ಲೂಕಿನ ಸಾದಲಿಯ ಸಾರ್ವಜನಿಕರ ಬಾಲಕರ ವಿದ್ಯಾರ್ಥಿನಿಲಯದಲ್ಲಿ ಆಯೋಜನೆ ಮಾಡಲಾಗಿದೆ. ಶಸ್ತ್ರಚಿಕಿತ್ಸೆಗೆ ಒಳಪಡುವವರು ಯಶಸ್ವಿನಿ ಅಥವಾ ರಾಷ್ಟ್ರೀಯ ಸ್ವಾಸ್ತ್ಯ ಭೀಮಾ ಯೋಜನೆಯ ಕಾರ್ಡ್ ಇದ್ದರೆ ಕಡ್ಡಾಯವಾಗಿ ತರುವುದು ಎಂದು ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ (ಪುಟ್ಟು) ತಿಳಿಸಿದ್ದಾರೆ.
ಕೃಷಿಕ ಸಮಾಜದ ಅಧ್ಯಕ್ಷ ಆನೂರು ದೇವರಾಜ್, ಕನ್ನಮಂಗಲ ಶರತ್, ಮೋಹನ್, ಸಲಿಂಭಾಷಾ, ಬಾಬು, ಮತ್ತಿತರರು ಹಾಜರಿದ್ದರು.