Home News ನೀತಿ ಸಂಹಿತೆ ಉಲ್ಲಂಘನೆ – ಬಿಜೆಪಿ ಮುಖಂಡ ಡಿ.ಆರ್‌.ಶಿವಕುಮಾರಗೌಡ ಅವರಿಗೆ ಶಿಕ್ಷೆ

ನೀತಿ ಸಂಹಿತೆ ಉಲ್ಲಂಘನೆ – ಬಿಜೆಪಿ ಮುಖಂಡ ಡಿ.ಆರ್‌.ಶಿವಕುಮಾರಗೌಡ ಅವರಿಗೆ ಶಿಕ್ಷೆ

0

ನೀತಿ ಸಂಹಿತೆ ಉಲ್ಲಂಘನೆ ಆರೋಪ ಎದುರಿಸುತ್ತಿದ್ದ ಬಿಜೆಪಿ ಮುಖಂಡ ಡಿ.ಆರ್‌.ಶಿವಕುಮಾರಗೌಡ ಅವರಿಗೆ ಸೋಮವಾರ ಸಿವಿಲ್‌ ನ್ಯಾಯಾಲಯ ಒಂದು ವರ್ಷ ಸಜೆ ಮತ್ತು ಹತ್ತು ಸಾವಿರ ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ.
ನೀತಿ ಸಂಹಿತೆ ಉಲ್ಲಂಘಿಸಿ ಆರೂವರೆ ಲಕ್ಷ ರೂಪಾಯಿಗಳ ಮೌಲ್ಯದ ಬಟ್ಟೆಗಳನ್ನು 12 ಮೂಟೆಗಳನ್ನು ತಾಲ್ಲೂಕಿನ ಹಾರಡಿ ಗ್ರಾಮದ ಸಮೀಪವಿರುವ ಕರ್ಣಶ್ರೀ ಚಾರಿಟೆಬಲ್ ಟ್ರಸ್ಟ್‌ ಕಚೇರಿಯಲ್ಲಿ 2013 ರ ಏಪ್ರಿಲ್‌ 13 ರಂದು ಚುನಾವಣಾಧಿಕಾರಿಗಳು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿತ್ತು. 2013ರ ಮೇ 5 ರಂದು ನಡೆಯಲಿದ್ದ ವಿಧಾನಸಭಾ ಚುನಾವಣೆಯಲ್ಲಿ ಡಿ.ಆರ್‌.ಶಿವಕುಮಾರಗೌಡ ಅವರು ಕೆಜೆಪಿ ಅಭ್ಯರ್ಥಿಯಾಗಿದ್ದರು. ಅವರ ಕಚೇರಿಯಲ್ಲಿ 6,34,650 ರೂಗಳು ಬೆಲೆ ಬಾಳುವ 31 ಸೀರೆಗಳು, 150 ಖಾಕಿ ಪ್ಯಾಂಟ್‌ ಪೀಸ್‌ಗಳು, ‘ಡಿ.ಆರ್‌.ಶಿವಕುಮಾರಗೌಡ’ ಎಂದು ಹೆಸರು ಹಾಗೂ ಭಾವಚಿತ್ರ ಮುದ್ರಿಸಿದ್ದ 7,500 ಟೀ-ಶರ್ಟ್‌ಗಳನ್ನು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ದಾಸ್ತಾನು ಮಾಡಿರುವುದಾಗಿ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಲಾಗಿತ್ತು.
ಈ ಪ್ರಕರಣದಲ್ಲಿ ಆರೋಪಗಳಿಗೆ ಡಿ.ಆರ್‌.ಶಿವಕುಮಾರಗೌಡ ಅವರನ್ನು ದೋಷಿ ಎಂದು ತೀರ್ಮಾನಿಸಿ ಈ ಆರೋಪಕ್ಕೆ ಒಂದು ವರ್ಷದ ಸಾದಾ ಕಾರಗೃಹದ ವಾಸ ಹಾಗೂ ಹತ್ತು ಸಾವಿರ ರೂ ದಂಡ ವಿಧಿಸಿದೆ. ದಂಡ ಪಾವತಿಸಲು ತಪ್ಪಿದಲ್ಲಿ ಆರೋಪಿಯು ಮೂರು ತಿಂಗಳ ಕಾಲ ಸಾದಾ ಕಾರಗೃಹದ ವಾಸದ ಶಿಕ್ಷೆ ಅನುಭವಿಸತಕ್ಕದ್ದು ಎಂದು ತೀರ್ಪನ್ನು ನೀಡಲಾಗಿದೆ. ಆರೋಪಿಯಿಂದ ವಶಪಡಿಸಿಕೊಂಡಿರುವ ಬೆಲೆ ಬಾಳುವ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಂಡು ಬಹಿರಂಗ ಹರಾಜುಪಡಿಸಿ ಬರುವ ಹಣವನ್ನು ಸರ್ಕಾರದ ಲೆಕ್ಕಕ್ಕೆ ಜಮಾ ಮಾಡಲು ತೀರ್ಪಿನಲ್ಲಿ ಸೂಚಿಸಲಾಗಿದೆ.

error: Content is protected !!