Home News ನೀರು ಬರುವವರೆಗೂ ಹೋರಾಟ ನಿಲ್ಲದು

ನೀರು ಬರುವವರೆಗೂ ಹೋರಾಟ ನಿಲ್ಲದು

0

‘ಹರಿಯಲಿ ಹರಿಯಲಿ ಕೆರೆಗೆ ನೀರು ಹರಿಯಲಿ’, ‘ತುಂಬಲಿ ತುಂಬಲಿ ನಮ್ಮ ಕೆರೆ ತುಂಬಲಿ’ ಎಂದು ಘೋಷಣೆಗಳನ್ನು ಕೂಗುತ್ತಾ ‘ನೀರಿಗಾಗಿ ಪರದಾಟ, ಪರಿಹಾರಕ್ಕಾಗಿ ಹೋರಾಟ’ ಎನ್ನುತ್ತಾ ಜನ–ಜಲ ಜಾಗೃತಿ ಪಾದಯಾತ್ರೆ ನಡೆಸುತ್ತಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಸದಸ್ಯರು ಬುಧವಾರ ತಾಲ್ಲೂಕಿನ ಕುಂದಲಗುರ್ಕಿ ಪಂಚಾಯತಿಯನ್ನು ಪ್ರವೇಶಿಸಿದರು.
ತಮಟೆಗಳ ಸದ್ದಿನೊಂದಿಗೆ ಘೋಷಣೆಗಳನ್ನು ಕೂಗುತ್ತಾ 28ನೇ ದಿನದ ಪಾದಯಾತ್ರೆಯಲ್ಲಿ ಪಾಲ್ಗೊಂಡು ಆಗಮಿಸಿದ ಶಾಶ್ವತ ನೀರಾವರಿ ಹೋರಾಟ ಸಮಿತಿ ಸದಸ್ಯರನ್ನು ಗ್ರಾಮಸ್ಥರು ಪಂಚಾಯತಿ ಮುಂದೆ ಸ್ವಾಗತಿಸಿದರು.
‘ನೀರಿಗೆ ಜಾತಿಯಿಲ್ಲ, ರಾಜಕೀಯ ಪಕ್ಷವಿಲ್ಲ, ಮೇಲು ಕೀಳೆಂಬ ಬೇಧವಿಲ್ಲ, ಬಡವ ಬಲ್ಲಿದನೆಂಬ ತಾರತಮ್ಯವಿಲ್ಲ, ರೈತ ಅಧಿಕಾರಿ ಎಂಬ ವ್ಯತ್ಯಾಸವಿಲ್ಲ. ಬಯಲು ಸೀಮೆಯ ಎಲ್ಲರಿಗೂ ನೀರು ಅತ್ಯವಶ್ಯ. ಶಾಶ್ವತವಾದ ನೀರಿನ ಹರಿವು ಬರದಿದ್ದಲ್ಲಿ ನಮ್ಮ ಭೂಭಾಗ ಬೆಂಗಾಡಾಗಿ ಮರುಭೂಮಿಯಾಗುತ್ತದೆ. ನಮಗಿಲ್ಲಿ ಉತ್ಪಾದನೆಗಳಾಗದೆ, ಜನ ಜಾನುವಾರುಗಳಿಗೆ ನೀರಿಲ್ಲದೆ, ಬೆಳೆ ಬೆಳೆಯಲಾಗದೆ ವಲಸೆ ಪ್ರಕ್ರಿಯೆ ಮೊದಲಾಗುತ್ತಿದೆ. ನಮ್ಮ ನೆಲವನ್ನು ತೊರೆಯುವುದೋ ಅಥವಾ ನೀರಿಗಾಗಿ ಹೋರಾಡುವುದೋ ಜನರು ಶೀಘ್ರವಾಗಿ ತೀರ್ಮಾನಿಸಬೇಕು. ಜನರಲ್ಲಿ ನಮ್ಮ ಕರಾಳ ಭವಿಷ್ಯದ ಬಗ್ಗೆ ತಿಳಿಸುತ್ತಾ ಪರಿಹಾರಕ್ಕಾಗಿ ಹೋರಾಟ ಮನೋಭೂಮಿಕೆಯನ್ನು ಸಿದ್ಧಪಡಿಸುತ್ತಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಸದಸ್ಯರು ನೂರಕ್ಕೂ ಹೆಚ್ಚು ಗ್ರಾಮ ಪಂಚಾಯತಿಗಳಲ್ಲಿ ಕಳೆದ ಒಂದು ತಿಂಗಳಿನಿಂದ ಪಾದಯಾತ್ರೆ ನಡೆಸಿದ್ದಾರೆ. ಎಲ್ಲರೂ ಕೈಜೋಡಿಸಿ ಒಗ್ಗೂಡಿ ಸರ್ಕಾರದ ಕಣ್ಣು ತೆರೆಸೋಣ’ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಕೆಂ.ಎಂ.ವೆಂಕಟೇಶ್‌ ತಿಳಿಸಿದರು.
ತಾಲ್ಲೂಕಿನ ಕುಂದಲಗುರ್ಕಿ, ಪಲಿಚೆರ್ಲು, ದೊಡ್ಡತೇಕಹಳ್ಳಿ ಮತ್ತು ಬಶೆಟ್ಟಹಳ್ಳಿ ಗ್ರಾಮ ಪಂಚಾಯತಿಗಳಲ್ಲಿ ಬುಧವಾರ ಶಾಶ್ವತ ನೀರಾವರಿ ಹೋರಾಟ ಸಮಿತಿ ಸದಸ್ಯರು ನಡೆಸಿದ ಪಾದಯಾತ್ರೆಯಲ್ಲಿ ಜನರು ಬೆಂಬಲಿಸಿದ್ದಲ್ಲದೆ, ತಮ್ಮ ಪಂಚಾಯತಿ ಮತ್ತು ಹಾಲು ಉತ್ಪಾದಕರ ಸಹಕಾರ ಸೊಸೈಟಿಗಳಿಂದ ಬೆಂಬಲ ಸೂಚಿಸುವ ಪತ್ರಗಳನ್ನೂ ನೀಡಿದರು.
ಡಿ.ಸಿ.ಸಿ.ಬ್ಯಾಂಕ್‌ ನಿರ್ದೇಶಕ ಶಿವಾರೆಡ್ಡಿ, ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ, ಮಳ್ಳೂರು ಹರೀಶ್‌, ದೊಣ್ಣಹಳ್ಳಿ ರಾಮಣ್ಣ, ತಾದೂರು ಮಂಜುನಾಥ್‌ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

error: Content is protected !!