Home News ನೀಲಗಿರಿ ಮರಗಳ ನಡುವೆ ಬೇವಿನ ಆಶಾಕಿರಣ

ನೀಲಗಿರಿ ಮರಗಳ ನಡುವೆ ಬೇವಿನ ಆಶಾಕಿರಣ

0

ಅಂತರ್ಜಲ ಮಟ್ಟ ತಗ್ಗುವುದಕ್ಕೆ ಕಾರಣವಾಗುತ್ತಿರುವ ನೀಲಗಿರಿ ಮರ ಬೆಳೆಯುವುದನ್ನು ರಾಜ್ಯಾದ್ಯಾಂತ ಸಂಪೂರ್ಣ ನಿಷೇಧಿಸುವ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಈಗಾಗಲೇ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ತೋಟಗಾರಿಕೆ ಇಲಾಖೆಯವರೂ ಈ ಬಗ್ಗೆ ಆಗಾಗ್ಗೆ ಅರಿವು ಮೂಡಿಸುತ್ತಿರುತ್ತಾರೆ. ಆದರೂ ತಾಲ್ಲೂಕಿನಲ್ಲಿ ಸಾಕಷ್ಟು ಎಕರೆ ಪ್ರದೇಶಗಳಲ್ಲಿ ನೀಲಗಿರಿ ಬೆಳೆಯಲಾಗುತ್ತಿದೆ.
ಆದರೆ ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮದ ಅನಂತರಾಮಯ್ಯ ಎಂಬ ರೈತರೊಬ್ಬರು ನೀಲಗಿರಿ ತೋಪುಗಳ ನಡುವೆ ಇರುವ ತಮ್ಮ ಎರಡೂ ಮುಕ್ಕಾಲು ಎಕರೆ ಜಮೀನಿನಲ್ಲಿ ಬೇವಿನ ಸಸಿಗಳನ್ನು ನಾಟಿ ಮಾಡುತ್ತಾ ಪರಿಸರ ಸ್ನೇಹಿ ಕಾರ್ಯಕ್ಕೆ ಸಜ್ಜಾಗಿದ್ದಾರೆ. ಅಂತರ್ಜಲ ಕುಸಿದಿರುವ ತಾಲ್ಲೂಕಿನಲ್ಲಿ ಜಲವನ್ನು ಸೂರೆಗೊಳ್ಳುವ ನೀಲಗಿರಿಯ ತೋಪುಗಳ ನಡುವೆ ಬೇವಿನ ಸಸಿಗಳೊಂದಿಗೆ ಹೊಸ ಆಶಾಭಾವವನ್ನು ಬಿತ್ತುತ್ತಿರುವುದು ವಿಶೇಷವಾಗಿದೆ.
ಬೇವಿಗೆ ಭಾರತ ತವರೂರು. ಇದರ ಉಪಯೋಗಳನ್ನು ಅನಾದಿಯಿಂದಲೂ ನಮ್ಮವರು ಮಾಡುತ್ತಲೇ ಬಂದಿದ್ದಾರೆ. ಈ ಸಸ್ಯದ ಅನೇಕ ಭಾಗಗಳು ಕೀಟ ನಾಶಕ ಗುಣಗಳನ್ನು ಹೊಂದಿವೆಯಾದರೂ, ಬೀಜಗಳು ಹೆಚ್ಚು ಉಪಕಾರಿ. ಬೇವಿನಲ್ಲಿರುವ ರಸಾಯನಿಕಗಳು ಕೀಟನಾಶಕ ಗುಣವನ್ನು ಹೊಂದಿವೆ. ಬೇವಿನಲ್ಲಿ ಹಲವಾರು ರಾಸಾಯನಿಕ ಅಂಶಗಳಿರುವುದರಿಂದ ಇದು ಅತ್ಯಂತ ಶ್ರೇಷ್ಠ ಹಾಗೂ ಪರಿಸರಪೂರಕವಾದ ಕೀಟನಾಶಕವಾಗಿರುತ್ತದೆ. ಹೀಗಾಗಿ ಬೇವು ರೈತರ ಪಾಲಗೆ ಅಪರೂಪದ ಮರ.
‘ನಮ್ಮ ಭಾಗದೆಲ್ಲೆಡೆ ಅಂತರ್ಜಲ ಪಾತಾಳಕ್ಕಿಳಿದಿದೆ. 1500 ಅಡಿ ಕೊಳವೆ ಬಾವಿ ಕೊರೆಸಿದರೂ ನೀರು ಸಿಗುವುದು ದುರ್ಲಭವಾಗಿದೆ. ನಮ್ಮ ಮಳಮಾಚನಹಳ್ಳಿ ಗ್ರಾಮದ ಸುತ್ತಮುತ್ತ ಬಹಳಷ್ಟು ನೀಲಗಿರಿ ತೋಪುಗಳಿವೆ. ಮಳೆಯಾಶ್ರಿತ ಬೆಳೆಯನ್ನು ಅವಲಂಭಿಸಲೂ ಸಾಧ್ಯವಿಲ್ಲ. ಹೀಗಾಗಿ ಪರಿಸರ ಕಾಪಾಡಲು ಹಾಗೂ ದನಕರುಗಳಿಗೆ ಮೇವು ಆಗುವ ಕಾರಣದಿಂದ ಸುಮಾರು 1500 ಬೇವಿನ ಸಸಿಗಳನ್ನು ನಮ್ಮ ಜಮೀನಿನಲ್ಲಿ ನೆಡಿಸುತ್ತಿರುವೆ. ಬೇವು ಕುರಿ, ಮೇಕೆ ಹಾಗೂ ದನಕರುಗಳಿಗೆ ಉತ್ತಮ ಮೇವು. ಉತ್ತಮ ಗಾಳಿ, ಆರೋಗ್ಯ ಇದರಿಂದ ಲಭಿಸುತ್ತದೆ. ಇದರಿಂದ ಹಲವು ಆಯುರ್ವೇದದ ಉಪಯುಕ್ತತೆಗಳೂ ಸಹ ಇವೆ’ ಎನ್ನುತ್ತಾರೆ ರೈತ ಅನಂತರಾಮಯ್ಯ.