ಕಳೆದ ಮೂರು ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿರುವ ಅಂಗನವಾಡಿ ಕಟ್ಟಡಗಳ ದುರಸ್ಥಿಗೆ ಏನು ಕ್ರಮ ತೆಗೆದುಕೊಂಡಿದ್ದೀರಿ ಎಂದು ಸಭೆಗೆ ವಿವರ ನೀಡಿ ಎಂದು ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಡಿಎಸ್ಎನ್ ರಾಜು ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರದ ತಾಲ್ಲೂಕು ಪಂಚಾಯತಿ ಕಚೇರಿ ಸಭಾಂಗಣದಲ್ಲಿ ಗುರುವಾರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಆಂಜಿನಮ್ಮನವರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ಎಸ್.ದೇವಗಾನಹಳ್ಳಿ, ಬಸವಾಪಟ್ಟಣ ಹಾಗೂ ಎಸ್.ದೇವಗಾನಹಳ್ಳಿಯ ಅಂಗನವಾಡಿ ಕೇಂದ್ರಗಳ ದುರಸ್ಥಿಗೆ ಕ್ರಿಯಾ ಯೋಜನೆ ರೂಪಿಸಿ ೩ ವರ್ಷಗಳಾಗಿದೆ. ಆದರೂ ಇದುವರೆಗೂ ದುರಸ್ಥಿ ಕಾರ್ಯ ಆಗಿಲ್ಲ ಯಾಕೆ ? ಹಣ ಏನಾಗಿದೆ ? ಸಭೆಗೆ ವಿವರಿಸಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಗಣಪತಿ ಸಾಕರೆಯವರು, ಅಂದಾಜು ಕ್ರಿಯಾ ಯೋಜನೆಗೂ ಇರುವ ಹಣದ ಮೊತ್ತಕ್ಕೂ ಹೊಂದಾಣಿಕೆಯಾಗದೆ ದುರಸ್ಥಿ ಕೆಲಸ ನೆನೆಗುದಿಗೆ ಬಿದ್ದಿದೆ ಎಂದು ವಿವರಿಸಿದರು.
ಈ ಕುರಿತು ಶೀಘ್ರವಾಗಿ ಸ್ಪಷ್ಟ ಆದೇಶವನ್ನು ನೀಡುವಂತೆ ಮೇಲಧಿಕಾರಿಗಳಿಗೆ ವಿವರವಾದ ಪತ್ರವನ್ನು ಬರೆಯುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಕೃಷಿ ಸಹಾಯಕ ನಿರ್ದೇಶಕ ಬಿ.ಸಿದೇವೇಗೌಡರು ಈಗಾಗಲೆ ತಾಲೂಕಿನಲ್ಲಿ ಕೃಷಿ ಭಾಗ್ಯ ಯೋಜನೆಯಡಿ ೮೦ ಕೃಷಿ ಹೊಂಡಗಳ ಕಾಮಗಾರಿ ಪೂರ್ಣಗೊಂಡಿದೆ ಎಂದು ವಿವರಿಸಿದರು. ರೇಷ್ಮೆ ಇಲಾಖೆಯ ವಿಸ್ತರಣಾಕಾರಿ ಎಂ.ನಾರಾಯಣಸ್ವಾಮಿ, ೧.೬೦ ಕೋಟಿ ರೂ.ಗಳ ಪ್ರಸ್ತಾವನೆ ಕಳುಹಿಸಿದ್ದು ಅಷ್ಟು ಹಣ ಬಿಡುಗಡೆ ಮಾಡಿದರೆ ೧೦ ರೂ.ಗಳ ಪ್ರೋತ್ಸಾಹದನ ವಿಲೇವಾರಿ ಮಾಡುತ್ತೇವೆ. ಇನ್ನು ೩೦ ರೂ.ಗಳ ಪ್ರೋತ್ಸಾಹದನ ಬಿಡುಗಡೆಯೆ ಆಗಿಲ್ಲ ಎಂದು ವಿವರಿಸಿದರು.
ಪಶುವೈದ್ಯಕೀಯ ಇಲಾಖೆಯ ಡಾ.ಮುನಿನಾರಾಯಣರೆಡ್ಡಿ, ಆರೋಗ್ಯ ಇಲಾಖೆಯ ಡಾ.ಅನಿಲ್ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಪುರುಷೋತ್ತಮ್, ತೋಟಗಾರಿಕೆ ಇಲಾಖೆಯ ಆನಂದ್, ಬಿಸಿಎಂ ಇಲಾಖೆಯ ಎಸ್.ಶಂಕರ್ ಮತ್ತಿತರರು ತಮ್ಮ ಇಲಾಖೆಯ ಪ್ರಗತಿಯ ವರದಿಯನ್ನು ಸಭೆಗೆ ವಿವರಿಸಿದರು.