Home News ನೆಲ್ಲಿಮರದಹಳ್ಳಿ ರಸ್ತೆಯ ದುರವಸ್ಥೆ

ನೆಲ್ಲಿಮರದಹಳ್ಳಿ ರಸ್ತೆಯ ದುರವಸ್ಥೆ

0

ನಗರದ ಹೊರವಲಯದ ಪೂಜಮ್ಮ ದೇವಿಯ ದೇವಸ್ಥಾನದಿಂದ ನೆಲ್ಲಿಮರದಹಳ್ಳಿ ಹಾಗೂ ಹನುಮಂತಪುರಕ್ಕೆ ಹೋಗುವ ರಸ್ತೆಯು ಕೆಸರಿನ ಆಗರವಾಗಿದ್ದು, ಸಾರ್ವಜನಿಕರು ಈ ಬಗ್ಗೆ ಅಧಿಕಾರಿಗಳನ್ನು ಎಚ್ಚರಿಸಲು ಶನಿವಾರ ಪ್ರತಿಭಟನೆಯನ್ನು ಆಯೋಜಿಸಿದ್ದಾರೆ.
ಈ ಭಾಗದಲ್ಲಿ ಡಾಲ್ಫಿನ್ ಪಬ್ಲಿಕ್ ಶಾಲೆ, ಹಾಲು ಉತ್ಪಾದಕರ ಸಹಕಾರ ಸಂಘ, ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ, ಮಸೀದಿ, ಸರ್ಕಾರಿ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರಗಳಿವೆ. ಇಲ್ಲಿನ ರಸ್ತೆಗಳಲ್ಲಿನ ಕೆಸರು, ಗದ್ದೆಯ ರೂಪದಲ್ಲಿದ್ದು, ನಡೆದಾಡುವುದೇ ಕಷ್ಟಕರವಾಗಿರುವಾಗ ದ್ವಿಚಕ್ರ ವಾಹನಗಳು ಸಾಗುವುದು ಇನ್ನೂ ದುಸ್ಥರವಾಗಿದೆ.

ಶಿಡ್ಲಘಟ್ಟದ ಹೊರವಲಯದ ಪೂಜಮ್ಮ ದೇವಿಯ ದೇವಸ್ಥಾನದಿಂದ ನೆಲ್ಲಿಮರದಹಳ್ಳಿ ರಸ್ತೆಯಲ್ಲಿ ತ್ಯಾಜ್ಯದ ರಾಶಿ ಕೊಳೆಯುತ್ತಿರುವುದು.
ಶಿಡ್ಲಘಟ್ಟದ ಹೊರವಲಯದ ಪೂಜಮ್ಮ ದೇವಿಯ ದೇವಸ್ಥಾನದಿಂದ ನೆಲ್ಲಿಮರದಹಳ್ಳಿ ರಸ್ತೆಯಲ್ಲಿ ತ್ಯಾಜ್ಯದ ರಾಶಿ ಕೊಳೆಯುತ್ತಿರುವುದು.
ಈಗಾಗಲೇ ಹಲವಾರು ವಾಹನ ಸವಾರರು ಬಿದ್ದಿದ್ದಾರೆ, ಶಾಲಾ ಮಕ್ಕಳಂತೂ ತಮ್ಮ ಬಟ್ಟೆ ಕೈಕಾಲು, ಚಪ್ಪಲಿ ಶೂಗಳನ್ನು ಕೆಸರು ಮಾಡಿಕೊಂಡೇ ಮನೆಗೆ ಹೋಗಬೇಕಾಗಿದೆ. ಈ ಭಾಗದಲ್ಲಿನ ರೇಷ್ಮೆ ತಯಾರಿಕಾ ಘಟಕಗಳಿಗೆ ಅಗತ್ಯವಾದ ನೀರಿನ ಗಾಡಿಗಳು, ಸೌದೆ ಗಾಡಿಗಳು ಹೋಗಲಾರದಂತಾಗಿದೆ. ಮೆದುವಾದ ನೆಲದಲ್ಲಿ ವಾಹನಗಳ ಚಕ್ರಗಳು ಸಿಕ್ಕಿಹಾಕಿಕೊಳ್ಳುವುದರಿಂದ ಈ ಭಾಗಕ್ಕೆ ಆಟೋಗಳು ಸಹ ಹೋಗುತ್ತಿಲ್ಲ. ಅಧಿಕಾರಿಗಳಿಗೆ ಪ್ರತಿ ಮಳೆಗಾಲದಲ್ಲೂ ನಾವು ಮನವಿ ಸಲ್ಲಿಸುವುದು ತಪ್ಪುವುದಿಲ್ಲ. ಆದರೂ ಯಾರೊಬ್ಬರೂ ಕ್ರಮ ಕೈಗೊಳ್ಳದ ಕಾರಣ ಶನಿವಾರ ಈ ಬಗ್ಗೆ ಪ್ರತಿಭಟನೆಯನ್ನು ನಡೆಸಿ ತಹಶಿಲ್ದಾರ್ ಮತ್ತು ನಗರಸಭೆ ಆಯುಕ್ತರಿಗೆ ಮನವಿಯನ್ನು ಸಲ್ಲಿಸುತ್ತೇವೆ ಎಂದು ನರಸಿಂಹಮೂರ್ತಿ, ರಾಜಣ್ಣ, ನರಸಿಂಹರಾಜು, ದೇವರಾಜ್ ತಿಳಿಸಿದ್ದಾರೆ.