Home News ನೇತ್ರದಾನ ಮಾಡಿ ಅಂಧರಿಗೆ ಬೆಳಕಾಗಿ

ನೇತ್ರದಾನ ಮಾಡಿ ಅಂಧರಿಗೆ ಬೆಳಕಾಗಿ

0

ಸತ್ತಮೇಲೆ ಮಣ್ಣಲ್ಲಿ ಮಣ್ಣಾಗುವ ಕಣ್ಣುಗಳನ್ನು ದಾನ ಮಾಡಿ ಕತ್ತಲಲ್ಲಿ ಜೀವನ ಸಾಗಿಸುತ್ತಿರುವ ಅಂಧರ ಬಾಳಿಗೆ ಬೆಳಕು ನೀಡಿ ಎಂದು ಸಾರ್ವಜನಿಕ ಆಸ್ಪತ್ರೆಯ ನೇತ್ರಾಧಿಕಾರಿ ಎಂ.ಕೃಷ್ಣಪ್ಪ ತಿಳಿಸಿದರು.
ನಗರದಲ್ಲಿ ಶುಕ್ರವಾರ ರಾಷ್ಟ್ರೀಯ ನೇತ್ರದಾನ ಪಾಕ್ಷಿಕದ ಅಂಗವಾಗಿ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಸಹಯೋಗದಲ್ಲಿ ನೇತ್ರದಾನ ಕುರಿತಂತೆ ಜನಜಾಗೃತಿ ಜಾಥಾದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮೂಢನಂಬಿಕೆ, ಅಂಧಶ್ರದ್ಧೆ, ಕಂದಾಚಾರವನ್ನು ಬದಿಗಿರಿಸಿ, ನೇತ್ರದಾನ ಮಾಡುವ ಮೂಲಕ ಅಂಧರ ಬಾಳಿಗೆ ಬೆಳಕಾಗುವ ಅಗತ್ಯವಿದೆ. ಮಣ್ಣಲ್ಲಿ ಮಣ್ಣಾಗಿ ಕರಗುವ, ಬೂದಿಯಾಗಿ ಹೋಗುವ ದೇಹದ ಬಗ್ಗೆ ವ್ಯಾಮೋಹ ಇರಿಸಿಕೊಳ್ಳದೆ, ನಮ್ಮ ಜೀವನದ ನಂತರ ಈ ದೇಹ ಇತರರಿಗೂ ನೆರವಾಗಲಿ ಎಂಬ ಸದುದ್ದೇಶದಿಂದ ಅವಯವಗಳನ್ನು ದಾನ ನೀಡಬೇಕು ಎಂದು ಹೇಳಿದರು.
ಕಣ್ಣು ಪ್ರತಿಯೊಬ್ಬರ ಜೀವನದ ಅಮೂಲ್ಯವಾದ ಅಂಗವಾಗಿದೆ. ಕಾರಣಾಂತರಗಳಿಂದ ಕಣ್ಣುಗಳನ್ನು ಕಳೆದುಕೊಂಡು ಅಂಧತ್ವದಿಂದ ನರಳುವವರಿಗೆ ಮರಣಾನಂತರ ಕಣ್ಣುಗಳನ್ನು ದಾನ ಮಾಡಿ ಅಂಧತ್ವ ತೊಲಗಿಸಿ ಎಂದು ತಿಳಿಸಿದರು.
ಸರಸ್ವತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ತಮ್ಮ ವಾದ್ಯ ವೃಂದದೊಂದಿಗೆ ಕಣ್ಣನ್ನು ದಾನ ಮಾಡುವಂತೆ ಘೋಷಣಾ ಫಲಕಗಳನ್ನು ಹಿಡಿದು ಆರೋಗ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿದರು.
ತಾಲ್ಲುಕು ವೈದ್ಯಾಧಿಕಾರಿ ಡಾ.ಅನಿಲ್ಕುಮಾರ್, ಡಾ.ತಿಮ್ಮೇಗೌಡ, ಡಾ.ಅನೂಷಾ, ಡಿ.ಲವಕುಮಾರ್, ಎಂ.ಮೀನಾಕ್ಷಿ, ಮಮತಾ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.