ನಗರದ ಮುತ್ತೂರು ಭೀದಿಯ ಶ್ರೀ ರಾಘವೇಂದ್ರ ಸ್ವಾಮಿ ದೇವಸ್ಥಾನದ ಬಳಿ ಸೋಮವಾರ ಭಾರತೀಯ ರೆಡ್ ಕ್ರಾಸ್ ಸಂಸ್ಥೆ , ಕಾರ್ಮಿಕ ಇಲಾಖೆ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದೊಂದಿಗೆ ಜನಜಾಗೃತಿಗಾಗಿ ಹೊರಟ ಕೊರೊನಾ ಜಾಗೃತಿ ವಾಹನಕ್ಕೆ ಚಾಲನೆ ನೀಡಿ ನಗರಸಭೆ ಪೌರಾಯುಕ್ತ ತ್ಯಾಗರಾಜ್ ಮಾತನಾಡಿದರು.
ಕೊರೊನಾ ವೈರಸ್ ಕುರಿತಾಗಿ ನಗರ ಹಾಗೂ ಹಳ್ಳಿಹಳ್ಳಿಗಳಲ್ಲೂ ಜಾಗೃತಿ ಮೂಡಿಸಬೇಕಿದೆ. ಅರಿವು ಮೂಡಿಸುತ್ತಿರುವ ತಾಲ್ಲೂಕು ಕೊರೊನಾ ಸೈನಿಕರ ತಂಡಕ್ಕೆ ಎಲ್ಲರೂ ಸಹಕರಿಸಿ ಎಂದು ಅವರು ತಿಳಿಸಿದರು.
ತಾಲ್ಲೂಕಿನಾದ್ಯಂತ ನೋವೆಲ್ ಕೊರೊನಾ ವೈರಸ್ ಹರಡದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ನಾಗರಿಕರಿಗೆ ಜಾಗೃತಿ ಮೂಡಿಸಿ ಎಂದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಗುರುರಾಜ ರಾವ್ ಮಾತನಾಡಿ, ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಕೊರೊನಾ ವೈರಸ್ ಜಾಗೃತಿ ಅಭಿಯಾನವನ್ನು ಮಾಡುತ್ತಿದ್ದು, ಈ ದಿನ ಶಿಡ್ಲಘಟ್ಟ ತಾಲ್ಲೂಕಿಗೆ ಜಾಗೃತಿ ಮೂಡಿಸಲು ವಾಹನವು ಬಂದಿದೆ. ಇದರಿಂದ ಸಾರ್ವಜನಿಕರಿಗೆ ಬಹಳಷ್ಟು ಮಾಹಿತಿ ಸಿಗುತ್ತದೆ ಎಂದರು.
ತಾಲ್ಲೂಕು ರೆಡ್ ಕ್ರಾಸ್ ಸಂಸ್ಥೆಯ ಸಂಯೋಜಕ ಬಿ.ಆರ್.ಅನಂತಕೃಷ್ಣ ಮಾತನಾಡಿ, ಕೊರೊನಾ ವೈರಸ್ ಬಗ್ಗೆ ಜಾಗೃತಿ ಉಂಟು ಮಾಡಲು ಕರಪತ್ರ ಮತ್ತು ಧ್ವನಿವರ್ದಕದ ಮೂಲಕ ಶಿಡ್ಲಘಟ್ಟ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಈ ಜಾಗೃತಿ ವಾಹನ ಸಂಚರಿಸಿ ತಾಲ್ಲೂಕಿನ ಕೊರೊನಾ ಸೈನಿಕರ ಮುಖಾಂತರ ಮಾಹಿತಿಯನ್ನು ನೀಡಿ ಅರಿವನ್ನು ಮೂಡಿಸಲಿದೆ ಎಂದರು.
ನಗರಸಭೆ ಸದಸ್ಯರಾದ ಅನಿಲ್ ಕುಮಾರ್, ಮಂಜುನಾಥ, ಮಾಜಿ ಪುರಸಭಾ ಸದಸ್ಯ ಎನ್ ಲಕ್ಷ್ಮೀ ನಾರಾಯಣ(ಲಚ್ಚಿ), ಕರೋನ ಸೈನಿಕರಾದ ಮಂಜುನಾಥ್, ಅಶೋಕ್, ಸುರೇಶ, ವಿಶ್ವನಾಥ್ ಹಾಜರಿದ್ದರು.