Home News ಪಂಡಿತ್ ದೀನ್‌ದಯಾಳ್ ಉಪಾಧ್ಯಾಯರ ಜನ್ಮಶತಾಬ್ದಿ ಅಂಗವಾಗಿ ರಕ್ತದಾನ ಶಿಬಿರ

ಪಂಡಿತ್ ದೀನ್‌ದಯಾಳ್ ಉಪಾಧ್ಯಾಯರ ಜನ್ಮಶತಾಬ್ದಿ ಅಂಗವಾಗಿ ರಕ್ತದಾನ ಶಿಬಿರ

0

ಜನರ ನಾಡಿ ಮಿಡಿತವನ್ನು ಅರ್ಥೈಸಿಕೊಳ್ಳುವ ಮೂಲಕ ಹೋರಾಟ ಮನೋಭಾವವನ್ನು ರೂಢಿಸಿಕೊಂಡಿದ್ದ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯರು ಪ್ರತಿಯೊಬ್ಬರಿಗೂ ಆದರ್ಶವಾಗಿರಬೇಕು ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಬಿ.ಸಿ.ನಂದೀಶ್ ಹೇಳಿದರು.
ನಗರದ ಶ್ರೀ ನಗರೇಶ್ವರ ಕಲ್ಯಾಣಮಂಟಪದಲ್ಲಿ ಗುರುವಾರ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯರ ಜನ್ಮಶತಾಬ್ದಿ ಅಂಗವಾಗಿ ಭಾರತೀಯ ಜನತಾ ಪಕ್ಷ ಹಾಗೂ ರಾಷ್ಟ್ರೋತ್ಥಾನ ರಕ್ತನಿಧಿ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ರಕ್ತದಾನ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಪಂಡಿತ್ ದೀನ್ ದಯಾಳ್ ಉಪಾಧ್ಯಾಯರು ಭಾರತೀಯ ಜನ ಸಂಘದ ಮುಖಂಡರಾಗಿದ್ದವರು. ಏಕಾತ್ಮ ಮಾನವತಾವಾದ ಎಂಬ ಪ್ರಬಂಧ ಮಂಡಿಸಿ ಸಾಮ್ಯವಾದ ಮತ್ತು ಬಂಡವಾಳಶಾಹಿ ತತ್ವಗಳನ್ನು, ವಿಮರ್ಶಿಸಿ, ಅದಕ್ಕೆ ಬದಲಾಗಿ ರಾಜಕೀಯ ಮತ್ತು ಆಡಳಿತ ಪದ್ಧತಿಗೆ ಪ್ರಕೃತಿ ಮತ್ತು ಸೃಷ್ಟಿಯ ನಿಯಮಗಳಿಗೆ ಪೂರಕವಾದ ಮಾರ್ಗಗಳನ್ನು ಸೂಚಿಸಿದ್ದರು. ಸರಳ ಜೀವಿಯಾಗಿದ್ದ ಅವರ ಸಮಾಜ ಸೇವೆ, ಜನಪರ ಕಾಳಜಿ, ಜನರಿಗಾಗಿ ದುಡಿಯುವ ಮೂಲಕ ಉತ್ತಮ ಸೇವೆ ಯನ್ನು ಸಲ್ಲಿಸಿದ್ದು ವಿದ್ಯಾರ್ಥಿಗಳು ಸೇರಿದಂತೆ ನಾಗರೀಕರು ಅವರ ಆದರ್ಶವನ್ನು ನೆನೆಪಿಸಿಕೊಳ್ಳಬೇಕು ಎಂದರು.
ತಾಲ್ಲೂಕು ಬಿಜೆಪಿ ಮುಖಂಡ ಡಿ.ಆರ್.ಶಿವಕುಮಾರಗೌಡ ಮಾತನಾಡಿ ಸಮಾಜದಲ್ಲಿ ರಕ್ತದಾನದ ಬಗ್ಗೆ ಇರುವಂತಹ ತಪ್ಪು ಕಲ್ಪನೆಗಳನ್ನು ತೊಲಗಿಸುವುದರೊಂದಿಗೆ ಆರೋಗ್ಯವಂತ ನಾಗರೀಕರೆಲ್ಲರೂ ರಕ್ತದಾನ ಮಾಡುವುದರಿಂದ ಅಪಘಾತವಾಗಿ ರಕ್ತದ ಕೊರತೆಯಿಂದ ಮೃತ ಹೊಂದುತ್ತಿರುವ ಜನರ ಪ್ರಾಣ ಉಳಿಸಲು ಸಹಕಾರಿಯಾಗುತ್ತದೆ ಎಂದರು.
ಸಮಾಜದಲ್ಲಿ ಕೇವಲ ಅವಿದ್ಯಾವಂತರಲ್ಲಷ್ಟೇ ಅಲ್ಲದೇ ವಿದ್ಯಾವಂತರಲ್ಲೂ ರಕ್ತದಾನದ ಬಗ್ಗೆ ತಪ್ಪುಕಲ್ಪನೆಗಳು ಬೇರೂರಿದ್ದು ರಕ್ತದಾನದಿಂದ ಯಾವುದೇ ಅನಾಹುತಗಳಾಗುವುದಿಲ್ಲ ಬದಲಿಗೆ ರಕ್ತದಾನ ಮಾಡಿದವರಲ್ಲಿ ನೂತನ ರಕ್ತ ಉತ್ಪತ್ತಿಯಾಗುತ್ತದೆ ಎಂದರು.
ಬಿಜೆಪಿ ಮುಖಂಡರಾದ ಕೆ.ಆರ್.ಸುರೇಂದ್ರಗೌಡ, ದಾಮೋದರ್, ಸುಜಾತಮ್ಮ, ಬೈರರೆಡ್ಡಿ, ಪುರುಷೋತ್ತಮ್, ನರೇಶ್ ಹಾಜರಿದ್ದರು.