Home News ಪಟ್ಟಬದ್ಧ ಹಿತಾಸಕ್ತಿಗಳ ಒತ್ತಡದಿಂದ ನೀರಾವರಿ ಹೋರಾಟಕ್ಕೆ ಬಾರದ ಜಿಲ್ಲೆಯ ಸಾಧಕರು

ಪಟ್ಟಬದ್ಧ ಹಿತಾಸಕ್ತಿಗಳ ಒತ್ತಡದಿಂದ ನೀರಾವರಿ ಹೋರಾಟಕ್ಕೆ ಬಾರದ ಜಿಲ್ಲೆಯ ಸಾಧಕರು

0

ಶಾಶ್ವತ ನೀರಾವರಿ ಜಾರಿಗೊಳಿಸಲು ನಡೆಸುತ್ತಿರುವ ಹೋರಾಟಕ್ಕೆ ಅವಿಭಾಜ್ಯ ಜಿಲ್ಲೆಗಳ ಸಾಧಕರಾದ ಇಸ್ಫೋಸಿಸ್‌ ನಾರಾಯಣಮೂರ್ತಿ, ಭಾರತರತ್ನ ಸಿ.ಎನ್‌.ಆರ್‌.ರಾವ್‌, ನಿವೃತ್ತ ನ್ಯಾಯಾಧೀಶರಾದ ನಾಗಮೋಹನದಾಸ್‌, ನಿವೃತ್ತ ಲೋಕಾಯುಕ್ತ ಅಧಿಕಾರಿ ವೆಂಕಟಾಚಲಯ್ಯ ಮುಂತಾದವರನ್ನು ಕರೆತರಲು ಪ್ರಯತ್ನಿಸಿದ್ದೇವೆ. ಆದರೆ ಪಟ್ಟಬದ್ಧ ಹಿತಾಸಕ್ತಿಗಳ ಒತ್ತಡದಿಂದಾಗಿ ನೀರಾವರಿ ವಿಚಾರವಾಗಿ ಈ ಮಹನೀಯರು ಎಲ್ಲೂ ಪ್ರಸ್ತಾಪ ಮಾಡಿಲ್ಲ ಎಂದು ಮಾನವ ಹಕ್ಕುಗಳ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಡಾ.ಸಮೇತನಹಳ್ಳಿ ಲಕ್ಷ್ಮಣಸಿಂಗ್‌ ಆರೋಪಿಸಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಜಿಲ್ಲೆಯ ಮೂಲಭೂತ ಸಮಸ್ಯೆಗಳ ಬಗ್ಗೆ ಅದರಲ್ಲೂ ನೀರಿನ ವಿಚಾರವಾಗಿ ನಮ್ಮ ಹೋರಾಟ ನಿರಂತರವಾಗಿದೆ. ಮಾನವ ಹಕ್ಕುಗಳ ಜಾಗೃತಿ ಸಮಿತಿ ಶಿಡ್ಲಘಟ್ಟ ತಾಲ್ಲೂಕು ಸಮಿತಿಯನ್ನು ನೂತನವಾಗಿ ರಚಿಸಲಾಗಿದೆ. ತಾಲ್ಲೂಕು ಸಮಿತಿಯ ಪ್ರಥಮ ತಾಲ್ಲೂಕು ಸಮಾವೇಶದ ಅಂಗವಾಗಿ ಕಾನೂನು ಅರಿವು ವಿಚಾರ ಸಕಿರಣ, ಧರ್ಮ ಮತ್ತು ವೈಚಾರಿಕತೆ ಹಾಗೂ ಇತ್ತೀಚಿನ ವಿದ್ಯಮಾನಗಳ ಒಂದು ನೋಟ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮಾನವ ಹಕ್ಕುಗಳ ಜಾಗೃತಿ ಸಮಿತಿಯು ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ಅದನ್ನು ತಡೆಯುವ ಕ್ರಮಗಳ ಬಗ್ಗೆ ಜನಜಾಗೃತಿ ಕಾರ್ಯಕ್ರಮ ಇದಾಗಿದೆ. ಸ್ವಾತಂತ್ರ್ಯ, ಸಮಾನತೆ, ಶೋಷಣೆ ವಿರುದ್ಧ ದನಿ, ಧಾರ್ಮಿಕ ಸ್ವಾತಂತ್ರ್ಯ, ಸಮಾಜ ಸೇವೆ ಮುಂತಾದ ವಿಷಯಗಳ ಬಗ್ಗೆ ನಮ್ಮ ಹಕ್ಕುಗಳು ಮತ್ತು ಸೇವೆಗಳ ಕುರಿತಂತೆ ಜನರಿಗೆ ವಿಚಾರ ಮುಟ್ಟಿಸಲಾಗುವುದು ಎಂದು ವಿವರಿಸಿದರು.
ಮಾನವ ಹಕ್ಕುಗಳ ಜಾಗೃತಿ ಸಮಿತಿ ಜಿಲ್ಲಾಧ್ಯಕ್ಷ ಜಾತವಾರ ರಾಮಕೃಷ್ಣಪ್ಪ ಮಾತನಾಡಿ, ಮಹಿಳಾ, ರೈತ, ಕಾರ್ಮಿಕ, ಯುವ ಘಟಕಗಳು ನಮ್ಮ ಸಮಿತಿಯಲ್ಲಿದ್ದು, ಜಿಲ್ಲೆಯಾದ್ಯಂತ ಮಾನವ ಹಕ್ಕುಗಳ ಉಲ್ಲಂಘನೆಯಾದಲ್ಲಿ ಕೂಡಲೇ ಸ್ಪಂದಿಸುತ್ತಿದ್ದೇವೆ. ನಶಿಸುತ್ತಿರುವ ಜಿಲ್ಲೆಯ ವಿಶಿಷ್ಠ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಹೇಳಿದರು.
ಮಾನವ ಹಕ್ಕುಗಳ ಜಾಗೃತಿ ಸಮಿತಿ ಸಾಂಸ್ಕೃತಿಕ ಘಟಕದ ಅಧ್ಯಕ್ಷ ಜನಘಟ್ಟ ಕೃಷ್ಣಮೂರ್ತಿ, ಮಹಿಳಾ ರಾಜ್ಯ ಉಪಾಧ್ಯಕ್ಷೆ ಬಿ.ಸುನೀತಾ, ತಾಲ್ಲೂಕು ಅಧ್ಯಕ್ಷ ಎಂ.ಬಿ.ಬೈರಾರೆಡ್ಡಿ, ಉಪಾಧ್ಯಕ್ಷ ಚಂದ್ರು, ಪ್ರಧಾನ ಕಾರ್ಯದರ್ಶಿ ಸುರೇಶ್‌, ರಾಜಶೇಖರಗೌಡ, ಆಶಾಗೌಡ, ಮಲ್ಲೇಶ್‌, ಜಿಲ್ಲಾ ಗೌರವಾಧ್ಯಕ್ಷ ಆರ್‌.ಎಚ್‌.ನಾರಾಯಣಸ್ವಾಮಿ, ದೇವರಾಜ್‌, ತಾಲ್ಲೂಕು ಮಹಿಳಾ ಅಧ್ಯಕ್ಷೆ ಡಿ.ಎಂ.ಸೌಭಾಗ್ಯಮ್ಮ ಹಾಜರಿದ್ದರು.

error: Content is protected !!