Home News ಪಠ್ಯದ ಜ್ಞಾನದೊಂದಿಗೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಿ

ಪಠ್ಯದ ಜ್ಞಾನದೊಂದಿಗೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಿ

0

ಪಠ್ಯದ ಜ್ಞಾನದೊಂದಿಗೆ ನಡವಳಿಕೆಯಲ್ಲೂ ಪರಿಣತಿಯನ್ನು ಸಾಧಿಸುವ ತರಬೇತಿಯನ್ನು ಪಡೆಯುವುದು ಅತ್ಯವಶ್ಯ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎ.ಮುರಿಗೆಪ್ಪ ತಿಳಿಸಿದರು.
ಬಿ.ಎಂ.ವಿ. ಎಜುಕೇಷನ್‌ ಟ್ರಸ್ಟ್‌, ಸಮಾಜವಾದಿ ಅಧ್ಯಯನ ಕೇಂದ್ರ, ಬೆಂಗಳೂರು ರೋಟರಿ ಹೈಗ್ರೌಂಡ್ಸ್‌, ಭಕ್ತರಹಳ್ಳಿ ಗ್ರಾಮ ಪಂಚಾಯತಿ, ಹಾಲು ಉತ್ಪಾದಕರ ಸಹಕಾರ ಸಂಘ ಮತ್ತು ಸ್ಮೈಲ್‌ ಫೌಂಡೇಷನ್‌ ಸಹಯೋಗದಲ್ಲಿ ಬಿ.ಎಂ.ವಿ. ಪ್ರೌಢಶಾಲೆಯ ಆವರಣದಲ್ಲಿ ಪ್ರಾರಂಭಗೊಂಡ ಒಂದು ವಾರದ ರಾಷ್ಟ್ರ ಸೇವಾ ದಳದ ಶಿಬಿರವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಪರೀಕ್ಷೆಯನ್ನು ಬರೆದು ಉತ್ತಮ ಅಂಕಗಳಿರುವ ಅಂಕಪಟ್ಟಿ ಇದ್ದರೆ ಸಾಲದು, ಒಂದು ಸಮುದಾಯದ ಒಳಗೆ ಅಪೇಕ್ಷಿತವಾದ ವ್ಯಕ್ತತ್ವವಾಗಬೇಕಾದರೆ, ನಾನು ಎಂಬ ವ್ಯಕ್ತಿ ಕೇಂದ್ರದಿಂದ ನಾವು ಎಂಬ ಸಮುದಾಯ ಕೇಂದ್ರಿತ ಚಿಂತನೆ ಅಗತ್ಯವಿದೆ. ಗಾಂಧೀಜಿ, ಅಬ್ದುಲ್‌ಕಲಾಂ, ಸರ್‌.ಎಂ.ವಿಶ್ವೇಶ್ವರಯ್ಯ ಅವರಲ್ಲಿದ್ದುದು ಈ ಕಾಳಜಿ. ಸಧೃಡ ಶರೀರಕ್ಕೆ ಬೇಕಾದುದು ಒಳ್ಳೆಯ ಆಹಾರ ಮತ್ತು ವ್ಯಾಯಾಮ. ಸಧೃಡ ಮನಸ್ಸಿಗೆ ಅಗತ್ಯವಾದುದು ಎಲ್ಲರನ್ನೂ ಗೌರವಿಸುವ, ಪ್ರೀತಿಸುವ ಮತ್ತು ಕಾಳಜಿಯುಳ್ಳ ಸಕಾರಾತ್ಮಕ ಆಲೋಚನೆಗಳನ್ನು ವಿದ್ಯಾರ್ಥಿ ಜೀವನದಿಂದಲೇ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಬಿ.ಎಂ.ವಿ. ಎಜುಕೇಷನ್‌ ಟ್ರಸ್ಟ್‌ ಅಧ್ಯಕ್ಷ ಬಿ.ವಿ.ಮುನೇಗೌಡ, ಕಾರ್ಯದರ್ಶಿ ಎಲ್‌.ಕಾಳಪ್ಪ, ಸಮಾಜವಾದಿ ಅಧ್ಯಯನ ಕೇಂದ್ರದ ಇಂದು ನಾಗರಾಜು, ಬಾಪು ಹೆದ್ದೂರ್‌ ಶೆಟ್ಟಿ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಕೋಟೆ ಚನ್ನೇಗೌಡ, ಪ್ರೊ.ಹನುಮಂತ, ಆರ್‌.ಬಸವರಾಜು, ಪ್ರದೀಪ್‌ ರಾಧಾಕೃಷ್ಣ, ಬಾಬಾ ಸಾಹೇಬ್‌ ನದಾಫ್‌ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.