Home News ಪಡಿತರ ಚೀಟಿಗಾಗಿ ನಿಲ್ಲದ ನಾಗರಿಕರ ಅಲೆದಾಟ

ಪಡಿತರ ಚೀಟಿಗಾಗಿ ನಿಲ್ಲದ ನಾಗರಿಕರ ಅಲೆದಾಟ

0

ನೂತನ ಪಡಿತರ ಚೀಟಿಗಳನ್ನು ಪಡೆಯಲು ಕಳೆದ ಒಂದೂವರೆ ವರ್ಷದ ಹಿಂದೆ ಅರ್ಜಿಗಳನ್ನು ಹಾಕಿಕೊಂಡು ಪ್ರತಿನಿತ್ಯ ಅಲೆದಾಡುತ್ತಿದ್ದರೂ ಇದುವರೆಗೂ ಪಡಿತರ ಚೀಟಿಯನ್ನು ಪಡೆಯಲು ಸಾಧ್ಯವಾಗಿಲ್ಲವೆಂದು ನಾಗರೀಕರು ಆರೋಪಿಸಿದ್ದಾರೆ.
ಪಟ್ಟಣದ ತಾಲ್ಲೂಕು ಕಚೇರಿಯಲ್ಲಿರುವ ಆಹಾರ ಮತ್ತು ನಾಗರೀಕ ಸರಬರಾಜು ಶಾಖೆಯಲ್ಲಿ ನವೀಕರಣ, ಹಾಗೂ ನೂತನ ಪಡಿತರ ಚೀಟಿಗಳನ್ನು ಪಡೆದುಕೊಳ್ಳಲು ಪ್ರತಿದಿನವೂ ಅಲೆದಾಡುತ್ತಿದ್ದೇವೆ, ಬಂದಾಗಲೆಲ್ಲಾ ಸರ್ವರ್ ಸಮಸ್ಯೆ ಎನ್ನುತ್ತಾರೆ. ಇದರಿಂದಾಗಿ ಕಾರ್ಡುಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ತಾಲ್ಲೂಕಿನ ಸಾದಲಿ, ಬಶೆಟ್ಟಿಹಳ್ಳಿ, ಎಚ್.ಕ್ರಾಸ್ ಸೇರಿದಂತೆ ದೂರದ ಊರುಗಳಿಂದ ಪ್ರತಿನಿತ್ಯ ನೂರಾರು ರೂಪಾಯಿಗಳನ್ನು ಖರ್ಚು ಮಾಡಿಕೊಂಡು ಬರಬೇಕು, ಆದರೂ ಕೆಲಸಗಳಾಗುವುದಿಲ್ಲ, ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ, ಪ್ರತಿನಿತ್ಯ ಕೆಲಸ ಕಾರ್ಯಗಳನ್ನು ಬಿಟ್ಟು ಬರಬೇಕು. ಸರ್ಕಾರದ ಯಾವುದೇ ಸೌಲಭ್ಯಗಳನ್ನು ಪಡೆಯಬೇಕಾದರೂ ಪಡಿತರ ಚೀಟಿಗಳು ಬೇಕು. ತಾಲ್ಲೂಕು ಕಚೇರಿಯಲ್ಲಿ ಪಡಿತರ ಚೀಟಿಗಳನ್ನು ವಿತರಣೆ ಮಾಡದೆ ಇರುವುದರಿಂದ ತುಂಬಾ ಸಮಸ್ಯೆಗಳಾಗುತ್ತಿದ್ದು, ಅಧಿಕಾರಿಗಳು ಸ್ಪಂದಿಸಿ ಪಡಿತರ ಚೀಟಿಗಳನ್ನು ವಿತರಣೆ ಮಾಡಬೇಕು ಎಂದು ನಾಗರೀಕರು ಒತ್ತಾಯಿಸಿದ್ದಾರೆ.