ನಗರದ ಅರಳೇಪೇಟೆಯ ಬಸವೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ಪತಂಜಲಿ ಯೋಗ ಶಿಕ್ಷಣ ಸಮಿತಿ ಹಾಗೂ ಸಂಸ್ಕಾರ ಭಾರತಿ ವತಿಯಿಂದ ಯುಗಾದಿ ಹಬ್ಬದ ಆಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಬೆಳಗ್ಗೆ ೫ ಗಂಟೆಗೆ ಬ್ರಾಹ್ಮೀ ಮುಹೂರ್ತದಲ್ಲಿ ಸೂರ್ಯಾಭಿಮುಖವಾಗಿ ನಿಂತು ಸೂರ್ಯ ನಮಸ್ಕಾರವನ್ನು ಮಾಡಲಾಯಿತು. ವಿದ್ವಾನ್ ಶ್ಯಾಂಸುಂದರ್ ಮತ್ತು ತಂಡದರು ಪಿಟೀಲು ಮತ್ತು ಕೊಳಲಿನ ವಾದ್ಯವನ್ನು ನುಡಿಸಿದರು.
ಹೊಸವರ್ಷವನ್ನು ಸೂರ್ಯಾಭಿಮುಖವಾಗಿ ಕುಳಿತು ಗಾಯಿತ್ರಿ ಮಂತ್ರದೊಂದಿಗೆ ಸೂರ್ಯದೇವನಿಗೆ ಅರ್ಘ್ಯವನ್ನು ನೀಡಿದರು. ಯುಗಾದಿ ಹಬ್ಬದ ವಿಷೇಶತೆಯನ್ನು ವಿ. ಕೃಷ್ಣ ವಿವರಿಸಿ, ಬೇವು ಬೆಲ್ಲ ಜೀವನದಲ್ಲಿ ಸುಖ ಮತ್ತು ದುಃಖಗಳನ್ನು ಸಮಚಿತ್ತದಿಂದ ಸ್ವೀಕರಿಸುವುದರ ಸಂಕೇತ. ಹೋಳಿಗೆಯೂ ಆಯಾ ಋತುಮಾನಕ್ಕೆ ಅನುಗುಣವಾಗಿ ದೇಹಕ್ಕೆ ಬೇಕಾದ ಪ್ರೋಟೀನ್ಸ್ ಮತ್ತು ವಿಟಮೀನ್ಸ್ ಗಳನ್ನು ನೀಡುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಬಸವೇಶ್ವರ ಸ್ವಾಮಿಗೆ ಅಭಿಷೇಕ ಮತ್ತು ಪೂಜೆಯನ್ನು ಸಲ್ಲಿಸಿ ಬೇವು ಬೆಲ್ಲ ಸವಿದು ನಂತರ ಆಗಮಿಸಿದ್ದ ಎಲ್ಲರಿಗೂ ಪ್ರಸಾದದ ರೂಪದಲ್ಲಿ ಹೋಳಿಗೆಯನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಜಿಲ್ಲಾ ಸಂಚಾಲಕ ಸುಂದರಾ ಚಾರಿ, ತಾಲ್ಲೂಕು ಸಮಿತಿಯ ಅಧ್ಯಕ್ಷ ಶಂಕರಣ್ಣ, ಪ್ರಧಾನ ಕಾರ್ಯದರ್ಶಿ ಪಿ. ಶ್ರೀಕಾಂತ,ಸಂಸ್ಕಾರ ಭಾರತಿಯ ಅಧ್ಯಕ್ಷ ಬಿ.ಸಿ.ನಂದೀಶ್, ಚಂದ್ರಶೇಖರ್, ರವೀಂದ್ರನಾಥ, ಪ್ರಕಾಶ್, ಶಶಿಕಾಂತ್ ನಕ್ಷತ್ರಿ, ನಲ್ಲಿಮರದಹಳ್ಳಿ ಮಂಜುನಾಥ್, ಕಾಶೀನಾಥ ಮತ್ತಿತರರು ಹಾಜರಿದ್ದರು.