Home News ಪರಿಶಿಷ್ಠ ವರ್ಗಗಳ ಜನಸಂಖ್ಯೆಗನುಗುಣವಾಗಿ ಮೀಸಲಾತಿ ಕಲ್ಪಿಸಲು ಒತ್ತಾಯ

ಪರಿಶಿಷ್ಠ ವರ್ಗಗಳ ಜನಸಂಖ್ಯೆಗನುಗುಣವಾಗಿ ಮೀಸಲಾತಿ ಕಲ್ಪಿಸಲು ಒತ್ತಾಯ

0

ರಾಜ್ಯದ ಒಟ್ಟು ಜನಸಂಖ್ಯೆಯ ಶೇ ೦೭ ರಷ್ಟಿರುವ ಪರಿಶಿಷ್ಠ ವರ್ಗಗಳ ಜನಸಂಖ್ಯೆಗನುಗುಣವಾಗಿ ಸರ್ಕಾರಿ ಹುದ್ದೆಗಳಲ್ಲಿ ಹಾಗೂ ಶೈಕ್ಷಣಿಕ ರಂಗದಲ್ಲಿ ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ತಾಲ್ಲೂಕು ಘಟಕ ಹಾಗೂ ಮಹರ್ಷಿ ವಾಲ್ಮೀಕಿ ನಾಯಕ ಯುವಸೇನೆ ಪದಾಧಿಕಾರಿಗಳು ಸರ್ಕಾರಕ್ಕೆ ತಹಸೀಲ್ದಾರ್‌ರ ಮೂಲಕ ಗುರುವಾರ ಮನವಿ ಪತ್ರ ಸಲ್ಲಿಸಿದರು.
ರಾಜ್ಯಾದ್ಯಂತ ಸುಮಾರು ೭೦ ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯಿರುವ ವಾಲ್ಮೀಕಿ ಸಮುದಾಯಕ್ಕೆ ಜನಸಂಖ್ಯೆಗನುಗುಣವಾಗಿ ಮೀಸಲಾತಿ ಸಿಗುತ್ತಿಲ್ಲ. ಶೇ ೩ ರಷ್ಟು ಮಾತ್ರ ಮೀಸಲಾತಿ ಸಿಗುತ್ತಿದ್ದು ಅದನ್ನು ಶೇ ೭.೫ ರಷ್ಟು ಹೆಚ್ಚಿಸುವ ಅಗತ್ಯವಿದೆ. ಕೆಲ ಮೇಲ್ವರ್ಗದ ಜನ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ಬಳಸಿಕೊಂಡು ಪರಿಶಿಷ್ಠ ವರ್ಗದ ಜನತೆಗೆ ಮೀಸಲಿರಿಸಿರುವ ಸವಲತ್ತುಗಳನ್ನು ಬಳಸಿಕೊಳ್ಳುತ್ತಿರುವುದು ಸಮುದಾಯದ ಗಮನಕ್ಕೆ ಬಂದಿದೆ. ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವವರ ವಿರುದ್ಧ ಕೂಡಲೇ ರಾಜ್ಯ ಸರ್ಕಾರ ಕಠಿಣ ಕ್ರಮ ಜರುಗಿಸಬೇಕು. ಮತ್ತು ಪ್ರತ್ಯೇಕ ಪರಿಶಿಷ್ಠ ವರ್ಗದ ಸಚಿವಾಲಯವನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿ ಸರ್ಕಾರಕ್ಕೆ ಶಿರಸ್ತೇದಾರ್ ಮಂಜುನಾಥ್‌ರ ಮೂಲಕ ಮನವಿ ಪತ್ರ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಶಿರಸ್ತೇದಾರ್ ಮಂಜುನಾಥ್ ಮನವಿಪತ್ರವನ್ನು ಮೇಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾದ ತಾಲ್ಲೂಕು ಅಧ್ಯಕ್ಷ ರಾಮಚಂದ್ರಪ್ಪ, ಮಹರ್ಷಿ ವಾಲ್ಮೀಕಿ ನಾಯಕ ಯುವಸೇನೆ ಅಧ್ಯಕ್ಷ ಮುತ್ತೂರು ವೆಂಕಟೇಶ್, ಉಪಾಧ್ಯಕ್ಷರಾದ ಮುನೇಶ್‌ನಾಯಕ, ಸಿ.ಆನಂದ, ಕಾರ್ಯದರ್ಶಿ ಕೆ.ಸಿ.ನರಸಿಂಹಯ್ಯ, ಪದಾಧಿಕಾರಿಗಳಾದ ಬಿ.ಕೆ.ಬಾಬು ಹಾಜರಿದ್ದರು.