Home News ಪರಿಸರ ಉಳಿಸಲು ಗಿಡ ನೆಡಿ

ಪರಿಸರ ಉಳಿಸಲು ಗಿಡ ನೆಡಿ

0

ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಕಲ್ಪಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಪರಿಸರ ಉಳಿಸಲು ಮತ್ತು ಅಂತರ್ಜಲ ಹೆಚ್ಚಿಸಲು ಪ್ರತಿಯೊಬ್ಬರೂ ಗಿಡಗಳನ್ನು ನೆಟ್ಟು ಪೋಷಿಸಬೇಕು ಎಂದು ಎಸ್.ಎನ್. ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ತಿಳಿಸಿದರು.
ನಗರದ ಹೊರವಲಯದ ರಾಜೀವ್ಗಾಂಧಿ ಬಡಾವಣೆಯ ಸಮೀಪದ ಮುಸ್ಲೀಮರ ಬಾಷುಬಾಬಾ ದರ್ಗಾ ಮತ್ತು ‘ಚೋಟಾ ಮಕಾನ್’ಗೆ ಸೇರಿರುವ ಸ್ಥಳದಲ್ಲಿ ಸುಮಾರು 200 ಗಿಡಗಳನ್ನು ನೆಟ್ಟು ಅವರು ಮಾತನಾಡಿದರು.
ಅಕ್ಷರ ಜ್ಞಾನ ಗೊತ್ತಿಲ್ಲದ ಸಾಲುಮರದ ತಿಮ್ಮಕ್ಕ ಲಕ್ಷಾಂತರ ಗಿಡಗಳನ್ನು ನೆಟ್ಟು ಪೋಷಿಸಿ ಸಮಾಜಕ್ಕೆ ಮಾದರಿ ಆಗಿದ್ದಾರೆ. ಅವರು ಪ್ರತಿಯೊಬ್ಬರಿಗೂ ಪ್ರೇರಣೆಯಾಗಬೇಕು. ನಗರ, ಪಟ್ಟಣಗಳು ಅಗಾಧ ಪ್ರಮಾಣದಲ್ಲಿ ಬೆಳೆಯುತ್ತಿವೆ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಉಳಿಸಲು ಪ್ರತಿಯೊಬ್ಬರೂ ಮುಂದಾಗಬೇಕು. ರಸ್ತೆ ಪಕ್ಕದಲ್ಲಿ, ಮನೆ ಅಕ್ಕಪಕ್ಕದಲ್ಲಿ, ಗಿಡಗಳನ್ನು ನೆಟ್ಟು ಪೋಷಿಸಬೇಕು. ಖಾಲಿ ಸ್ಥಳಗಳಲ್ಲಿ ಗಿಡಗಳನ್ನು ನೆಡುವ ಪರಿಪಾಠ ಬೆಳೆಯಬೇಕು ಎಂದು ಹೇಳಿದರು.
ಬಾಷುಬಾಬಾ ದರ್ಗಾ ಮತ್ತು ಚೋಟಾ ಮಕಾನ್ ಸಮಿತಿ ಅಧ್ಯಕ್ಷ ಬಕ್ಷು, ಸದಸ್ಯ ಅಬ್ದುಲ್ ರಹಮಾನ್ ಅವರು ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಅವರನ್ನು ಗೌರವಿಸಿದರು.
ಬೆಳ್ಳೂಟಿ ರಮೇಶ್, ಮದೀನಾ ಮಸೀದಿ ಕಾರ್ಯದರ್ಶಿ ಎ.ಆರ್.ಅಬ್ದುಲ್ ಅಜೀಜ್, ಟೀಪು ಆಟೋ ಕಮಿಟಿಯ ಅಧ್ಯಕ್ಷ ಮೌಲಾ, ಎಚ್.ಬಾಬು, ಟಿ.ಮುನೀರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.