Home News ಪರಿಸರ ಪ್ರೇಮಿ ಗಣಪನನ್ನು ಮಾಡಿದ ಅಪ್ಪೇಗೌಡನಹಳ್ಳಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿ ಎಚ್.ಪವನ್

ಪರಿಸರ ಪ್ರೇಮಿ ಗಣಪನನ್ನು ಮಾಡಿದ ಅಪ್ಪೇಗೌಡನಹಳ್ಳಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿ ಎಚ್.ಪವನ್

0

ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿ ಎಚ್.ಪವನ್ ಗ್ರಾಮದ ಕುಂಟೆಯ ಬಂಕಮಣ್ಣನ್ನು ಬಳಸಿ ಸುಂದರ ಪರಿಸರ ಪ್ರೇಮಿ ಗಣಪನನ್ನು ಮಾಡಿದ್ದಾನೆ.
ಆಮೆಯ ಮೇಲೆ ಕುಳಿತ ಗಣಪ ಕಾಲಿನ ಮೇಲೆ ಕಾಲು ಹಾಕಿ ಕುಳಿತಿದ್ದರೆ, ಹೊಟ್ಟೆಯನ್ನು ಸುತ್ತಿರುವ ನಾಗರಹಾವು, ಕೈಗಳಲ್ಲಿ ಶಂಖ, ಚಕ್ರ, ತ್ರಿಶೂಲ, ಕಿವಿಯಲ್ಲಿ ಓಲೆ, ಮೋದಕ ಹಾಗೂ ಗಣಪನ ಹಿಂದಿನ ಪ್ರಭಾವಳಿ ಎಲ್ಲವನ್ನೂ ಸುಂದರವಾಗಿ ರೂಪಿಸಿದ್ದಾನೆ.
“ಎಚ್.ಪವನ್, ಪ್ರತಿಭಾವಂತ ವಿದ್ಯಾರ್ಥಿ. ಕ್ಲೇ ಮಾಡಲಿಂಗ್ ಮಾಡುವುದರಲ್ಲಿ ಇಷ್ಟಪಟ್ಟು ಭಾಗವಹಿಸುತ್ತಾನೆ. ಅವನು ಆರನೇ ತರಗತಿಯಲ್ಲಿದ್ದಾಗ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಗೋಳಗುಮ್ಮಟ ಮಾಡಿ ಮೊದಲ ಬಹುಮಾನ ಪಡೆದಿದ್ದ. ಈ ವರ್ಷದ ಪ್ರತಿಭಾ ಕಾರಂಜಿಯಲ್ಲಿ ಸಿಂಧೂ ನಾಗರಿಕತೆಯ ರುಂಡದ ಮನುಷ್ಯ ಮಾಡಿ ಪ್ರಥಮ ಸ್ಥಾನ ಪಡೆದು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ನಮ್ಮ ಶಾಲೆಯಲ್ಲಿ ಮಕ್ಕಳಿಗೆ ಪಿಒಪಿ ಅಥವಾ ರಾಸಾಯನಿಕ ಬಣ್ಣಗಳನ್ನು ಬಳಿದ ಗಣಪನನ್ನು ಪೂಜಿಸಿ ನೀರಿನಲ್ಲಿ ಬಿಟ್ಟರೆ ಆಗುವ ಅನಾಹುತಗಳ ಬಗ್ಗೆ ತಿಳಿಸಿದೆವು. ಅದರ ಪರಿಣಾಮ ಎಚ್.ಪವನ್, ಆಮೆ ಮೇಲೆ ಕುಳಿತ ಗಣಪನನ್ನು ಮಾಡಿದ್ದಾನೆ. ಅವನಿಗೆ ಅಶ್ವತ್ ಮತ್ತು ತೇಜಸ್ ಸಹಾಯ ಮಾಡಿದ್ದಾರೆ” ಎಂದು ಶಿಕ್ಷಕ ಚಾಂದ್ ಪಾಷ ತಿಳಿಸಿದರು.
“ನಮ್ಮ ಶಿಕ್ಷಕರು ಪರಿಸರ ಪ್ರೇಮಿ ಗಣೇಶನ ಬಗ್ಗೆ ತಿಳಿಸಿದರು. ಆಗ ಗಣೇಶನ ಮೂರ್ತಿಯನ್ನು ನಾವೇ ಮಾಡಿದರೆ ಹೇಗೆ ಎಂಬ ಆಲೋಚನೆ ಬಂತು. ನನ್ನ ಸ್ನೇಹಿತರ ಸಹಕಾರ ಪಡೆದು ಗಣಪತಿ ಮೂರ್ತಿಯನ್ನು ಮತ್ತು ಗೌರಮ್ಮನನ್ನು ಮಾಡಿದೆವು. ನಮ್ಮ ಶಾಲೆಯಲ್ಲಿರುವ ಪುಟ್ಟ ಗಣೇಶನ ದೇವಾಲಯದಲ್ಲಿ ಈ ಮೂರ್ತಿಗಳನ್ನು ಇಟ್ಟು ಮೂರು ದಿನಗಳ ಕಾಲ ಪೂಜೆ ಮಾಡಲಿದ್ದೇವೆ. ನಂತರ ಒಂದು ಬಕೇಟಿನಲ್ಲಿನ ನೀರಿನಲ್ಲಿ ಮುಳುಗಿಸಿ ವಿಸರ್ಜನೆ ಮಾಡಿ ಗಿಡಕ್ಕೆ ಹಾಕುತ್ತೇವೆ” ಎಂದು ಎಚ್.ಪವನ್ ಹೇಳಿದನು.

error: Content is protected !!