ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಶನಿವಾರ ವಿಜಯಪುರ ಪ್ರಗತಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಹಮ್ಮಿಕೊಂಡಿದ್ದ ಎನ್.ಎಸ್.ಎಸ್ ಶಿಬಿರದಲ್ಲಿ ಉಚಿತ ಪಶು ತಪಾಸಣಾ ಶಿಬಿರದಲ್ಲಿ ನಿವೃತ್ತ ಪ್ರಾಧ್ಯಾಪಕ ಹಾಗೂ ಪ್ರಾಣಿ ಪ್ರಸೂತಿ ತಜ್ಞ ಡಾ.ಮರಗೂಬ್ ಹುಸೇನ್ ಮಾತನಾಡಿದರು.
ಗ್ರಾಮೀಣಭಾಗದ ಜೀವನಾಧಾರವಾಗಿರುವ ಹೈನುಗಾರಿಕೆಯನ್ನು ಕ್ರಮಬದ್ಧವಾಗಿ ಮತ್ತು ವೈಜ್ಞಾನಿಕ ಮಾದರಿಯಲ್ಲಿ ಮಾಡಬೇಕು. ಇಲ್ಲವಾದಲ್ಲಿ ನಷ್ಟಗಳ ಸರಮಾಲೆಯೇ ಉಂಟಾಗುತ್ತದೆ ಎಂದು ಅವರು ತಿಳಿಸಿದರು.
ಬಹುತೇಕ ಗ್ರಾಮೀಣರಿಗೆ ಹೈನುಗಾರಿಕೆ ಜೀವನಾಧಾರ. ಅವರ ದೈನಂದಿನ ಜೀವನಾವಶ್ಯಕತೆಗೆ ಅವಶ್ಯಕವಾದ ಹಣ ಇದರಿಂದಲೇ ದೊರೆಯುತ್ತದೆ. ಒಂದು ವೇಳೆ ಜಾನುವಾರುಗಳಿಗೆ ತಗುಲುವ ಸಾಂಕ್ರಾಮಿಕ ರೋಗಗಳ ಬಗ್ಗೆ ಮುಂಚಿತವಾಗಿ ತಿಳಿಯದಿದ್ದರೆ ಆಗುವ ನಷ್ಟ ಅಪಾರ. ಉಚಿತ ಪಶು ಆರೋಗ್ಯ ತಪಾಸಣಾ ಶಿಬಿರವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಈ ಶಿಬಿರದಲ್ಲಿ ಜಂತು ನಿವಾರಣೆ, ಬರಡು ರಾಸಿಗೆ ಚಿಕಿತ್ಸೆ, ಗರ್ಭ ಪರೀಕ್ಷೆ, ಲಸಿಕೆಗಳ ಮಾಹಿತಿ ಮತ್ತು ಚಿಕಿತ್ಸೆ ನೀಡಲಾಯಿತು. ೧೩೨ ಹಸುಗಳು, ೫೬ ಬರಡು ರಾಸು, ೮ ಕರುಗಳು ಸೇರಿದಂತೆ ೪೦ ಪಡ್ಡೆಗಳಿಗೆ ಚಿಕಿತ್ಸೆ ನೀಡಲಾಯಿತು. ವಿಟಮಿನ್ ಇಂಜಕ್ಷನ್ ಮತ್ತು ಮಿನರಲ್ ಮಿಕ್ಸ್ ಚರ್ ಉಚಿತವಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ಕೋಚಿಮುಲ್ ಶಿಬಿರ ಘಟಕದ ಉಪವ್ಯವಸ್ಥಾಪಕ ಡಾ.ಚಂದ್ರಶೇಖರ್, ಪಶು ವೈದ್ಯರಾದ ಡಾ.ಹರೀಶ್, ಎಂ.ಎಸ್.ಸಿದ್ದೇಶ್, ಪಶು ಕೃತಕ ಗರ್ಭಧಾರಣೆ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಅಪ್ಪಾಜಿಗೌಡ, ಎಂಪಿಸಿಎಸ್ ಅಧ್ಯಕ್ಷ ಮುನಿವೆಂಕಟಸ್ವಾಮಪ್ಪ, ಮಾಜಿ ಅಧ್ಯಕ್ಷ ರವಿಪ್ರಕಾಶ್, ಎಂಪಿಸಿಎಸ್ ಕಾರ್ಯದರ್ಶಿ ಗೋವಿಂದರಾಜು, ಪ್ರಗತಿ ಕಾಲೇಜು ಎನ್ ಎಸ್ ಎಸ್ ಅಧಿಕಾರಿ ಆರ್.ಶೆಟ್ಟಿನಾಯಕ್, ಕಸಾಪ ಅಧ್ಯಕ್ಷ ಎ.ಎಂ.ತ್ಯಾಗರಾಜ್ ಹಾಜರಿದ್ದರು