Home News ಪಿಂಚಣಿ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ

ಪಿಂಚಣಿ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ

0

ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲೆಂದು ಪಿಂಚಣಿ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಲಾಗುತ್ತಿದೆ. ಶಸ್ತ್ರಚಿಕಿತ್ಸೆಯನ್ನು ಸಹ ಉಚಿತವಾಗಿ ಮಾಡಿಸಲಾಗುವುದು ಎಂದು ಎಸ್.ಎನ್.ಕ್ರಿಯಾ ಟ್ರಸ್ಟ್ನ ಅದ್ಯಕ್ಷ ಆಂಜಿನಪ್ಪ ಪುಟ್ಟು ತಿಳಿಸಿದರು.
ತಾಲ್ಲೂಕಿನ ಕುಂದಲಗುರ್ಕಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಹೊಸಕೋಟೆಯ ಎಂ.ವಿ.ಜೆ ಹಾಸ್ಪಿಟಲ್ ಹಾಗೂ ಎಸ್.ಎನ್.ಕ್ರಿಯಾ ಟ್ರಸ್ಟ್ನ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಟ್ರಸ್ಟ್ ವತಿಯಿಂದ ಪಿಂಚಣಿ ಶಿಬಿರವನ್ನು ಹಮ್ಮಿಕೊಂಡಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರಿಗೆ ಗುರುತಿನ ಚೀಟಿ, ಹಿರಿಯ ನಾಗರಿಕರಿಗೆ ಗುರುತಿನ ಚೀಟಿಯನ್ನು ಅಗತ್ಯವಿರುವ ದಾಖಲೆಗಳನ್ನು ಪಡೆದು ಮಾಡಿಸಿಕೊಡುತ್ತೇವೆ. ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ತಜ್ಞ ವೈದ್ಯರು ಬಂದಿದ್ದಾರೆ. ಸ್ತ್ರೀ ರೋಗ ಮತ್ತು ಪ್ರಸೂತಿ, ಮೂಳೆ, ಶಿಶು ವೈದ್ಯಕೀಯ, ಕಣ್ಣಿನ ತಪಾಸಣೆ, ಕಿವಿ. ಮೂಗು, ಗಂಟಲು, ರಕ್ತದೊತ್ತಡ ಮತ್ತು ಮಧುಮೇಹ, ಬಿ.ಎಂ.ಐ, ಇ.ಸಿ.ಜಿ ಪರೀಕ್ಷೆಯನ್ನು ಸಹ ತಜ್ಞರು ಮಾಡುತ್ತಿದ್ದಾರೆ. ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಶಿಡ್ಲಘಟ್ಟ ತಾಲ್ಲೂಕಿನ ಕುಂದಲಗುರ್ಕಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಹೊಸಕೋಟೆಯ ಎಂ.ವಿ.ಜೆ ಹಾಸ್ಪಿಟಲ್ ಹಾಗೂ ಎಸ್.ಎನ್.ಕ್ರಿಯಾ ಟ್ರಸ್ಟ್ನ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಗ್ರಾಮಸ್ಥರು ವೈದ್ಯರಿಂದ ಚಿಕಿತ್ಸೆ ಪಡೆದರು.

ಎಸ್.ಎನ್.ಕ್ರಿಯಾ ಟ್ರಸ್ಟ್ನ ವತಿಯಿಂದ ತಾಲ್ಲೂಕಿನ ಹಲವು ಭಾಗಗಳಲ್ಲಿ ಸುಮಾರು ೧೮ಕ್ಕೂ ಹೆಚ್ಚು ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಿದ್ದು, ಶಿಬಿರದಲ್ಲಿ ಶಸ್ತ್ರಚಿಕಿತ್ಸೆಗೆ ಅರ್ಹರಾದವರಿಗೆ ಉಚಿತವಾಗಿ ಎಂ.ವಿ.ಜೆ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿ ಉಚಿತವಾಗಿ ಔಷದಿಗಳನ್ನು ಸಹ ವಿತರಣೆ ಮಾಡಿದ್ದು, ಶಸ್ತ್ರಚಿಕಿತ್ಸೆಗೆ ಒಳಪಟ್ಟ ಎಲ್ಲರೂ ಆರೋಗ್ಯವಾಗಿರುವುದಾಗಿ ತಿಳಿಸಿದರು.
ಗ್ರಾಮಗಳು ಭಾರತ ದೇಶದ ಬೆನ್ನೆಲುಬಾಗಿದ್ದು, ಗ್ರಾಮೀಣ ಭಾಗದ ಜನರು ಆರೋಗ್ಯವಾಗಿದ್ದಾಗ ಮಾತ್ರ ದೇಶ ಆರೋಗ್ಯವಾಗಿರಲು ಸಾದ್ಯ. ಗ್ರಾಮೀಣ ಭಾಗದ ಜನರು ಮದ್ಯಮ ಹಾಗೂ ಕೆಳ ಮದ್ಯಮ ವರ್ಗಕ್ಕೆ ಸೇರಿದ್ದು, ಬೆಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲು ಕಷ್ಟಕರವಾಗಿರುತ್ತದೆ. ಅವರ ಆರೋಗ್ಯ ಕಾಪಾಡಲು ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಂಡಿದ್ದು, ತಪಾಸಣೆಯ ನಂತರ ಅವರಿಗೆ ಬೇಕಾದ ಔಷಧಿಗಳನ್ನು, ಕನ್ನಡಕಗಳನ್ನು ಸ್ಥಳದಲ್ಲಿಯೇ ನೀಡುವ ವ್ಯವಸ್ಥೆ ಮಾಡಲಾಗಿದೆ. ವೈದ್ಯರ ಸಲಹೆ ಪಾಲಿಸಿ ಆರೋಗ್ಯವಂತರಾಗಿ ಎಂದು ಹೇಳಿದರು.
ಕೆ.ಎಂ.ವೆಂಕಟೇಶ್, ಅಶ್ವತನಾರಾಯಣರೆಡ್ಡಿ, ಆನೂರು ದೇವರಾಜು, ಹಿತ್ತಲಹಳ್ಳಿ ಸುರೇಶ್, ಮುನಿರಾಜು, ಸಿ.ಪಿ.ಎಂ ವೆಂಕಟೇಶ್, ಶ್ರೀನಿವಾಸ್, ಮಂಜುನಾಥ್, ರಾಜೇಂದ್ರ, ಡಾ. ನಿತಿನ್, ಸೋಮಶೇಖರ್, ನಾಗರಾಜ್, ಸುಂದರೇಶ್, ಬಾಬು, ವಿಶ್ವನಾಥ್ ಈ ಸಂದರ್ಭದಲ್ಲಿ ಹಾಜರಿದ್ದರು.

error: Content is protected !!