Home News ಪುಟಾಣಿ ಸಾಹಿತಿಗಳ 'ಶಾಮಂತಿ' ಪುಸ್ತಕ ಬಿಡುಗಡೆ

ಪುಟಾಣಿ ಸಾಹಿತಿಗಳ 'ಶಾಮಂತಿ' ಪುಸ್ತಕ ಬಿಡುಗಡೆ

0

ಪುಟಾಣಿ ಮಕ್ಕಳಿಗಾಗಿ ಚಂದದೊಂದು ಹೊಸ ಪುಸ್ತಕ ಬಂದಿದೆ. ಪುಸ್ತಕ ಬರೆದಿರೋರು ಪ್ರಸಿದ್ಧ ವ್ಯಕ್ತಿಗಳ್ಯಾರೂ ಅಲ್ಲ. ಮುಗ್ಧ ಮನಸ್ಸಿನ ಚಿನ್ನಾರಿಗಳು. ಅವರು ತಾಲ್ಲೂಕಿನ ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು.
14sdls2ಅಂದಹಾಗೆ ಆ ಶಾಲೆಯಿಂದ ಹೊರಬರುತ್ತಿರುವ ನಾಲ್ಕನೇ ಪುಸ್ತಕ ಇದು. ಹೆಸರು `ಶಾಮಂತಿ- 4′. ಇದರಲ್ಲಿ ಆ ಮಕ್ಕಳು ಬರೆದಿರೋ 52 ಬರಹಗಳಿವೆ. ಪುಸ್ತಕದ ಕುರಿತು ದೊಡ್ಡವರು ಬರೆದಿರುವ ಅಭಿಪ್ರಾಯಗಳನ್ನೂ ಸಂಗ್ರಹಿಸಲಾಗಿದೆ. ಮಕ್ಕಳಿಂದ ಬರೆಸಿ ಅದನ್ನು ಚಿಣ್ಣರಿಗೆ ಇಷ್ಟವಾಗುವಂತೆ ಹೊರ ತಂದಿರುವುದು ಸಂಪಾದಕ ಎಸ್. ಕಲಾಧರ. ಮುಖಪುಟ, ಒಳಪುಟಗಳ ವಿನ್ಯಾಸವನ್ನು ಅವರೇ ಮಾಡಿದ್ದಾರೆ. ಇವರ ಕೆಲಸವನ್ನು ಪ್ರೋತ್ಸಾಹಿಸಿರೋದು ಸಹಶಿಕ್ಷಕರು ಮತ್ತು ಕನ್ನಮಂಗಲದ ಸ್ನೇಹ ಕಲಾಸಂಘ.
ದೊಡ್ಡವರು ಬರೆವ ಮಕ್ಕಳ ಪುಸ್ತಕಕ್ಕಿಂತ ಇದು ವಿಭಿನ್ನ. ಈ ಎಳೆಯರ ಜಗತ್ತು ಅತ್ಯಂತ ತಾಜಾ. ದಿನವೂ ನೋಡುವ ಮನೆ, ಶಾಲೆ, ಮೈದಾನ, ತೋಟ, ಪ್ರಾಣಿ ಪಕ್ಷಿ ಮುಂತಾದವೆಲ್ಲಾ ಇಲ್ಲಿ ಬಣ್ಣ ತಳೆದಿವೆ. ಬರೆಯೋದು ಅಂದ್ರೆ ಬರೀ ಲೇಖನ ಅಲ್ಲ. ಅಲ್ಲಿ ಕತೆ, ಪದ್ಯ ಅಷ್ಟೇ ಏಕೆ, ನಾಟಕ ಕೂಡ ಇವೆ. ಕೆಲವು ಮಕ್ಕಳು ಒಳ್ಳೊಳ್ಳೆ ಚಿತ್ರ ಬರೆದಿದ್ದಾರೆ. ಅವರ ವಯಸ್ಸು ಅಬ್ಬಬ್ಬಾ ಅಂದ್ರೆ 9ರಿಂದ 13 ವರ್ಷ ಇರಬಹುದು ಅಷ್ಟೇ.
ಶಾಮಂತಿಯ ಮಕ್ಕಳ ಓದಿನ ಹರವು ಕೂಡ ವಿಸ್ತಾರವಾಗಿದೆಯೆಂದು ಮಕ್ಕಳ ಬರಹಗಳ ಮೂಲಕ ಗೊತ್ತಾಗುತ್ತದೆ. ಅದರಲ್ಲಿ ಕುವೆಂಪುರವರ ‘ಗಗನಗುರು’, ಲಂಕೇಶರ ‘ಅವ್ವ’, ಸಿದ್ದಲಿಂಗಯ್ಯನವರ ‘ನನ್ನ ಕವನ‘, ಬೋಳುವಾರು ಅವರ ‘ಪಾಪು ಗಾಂಧಿ ಗಾಂಧಿ ಬಾಪುವಾದ ಕತೆ’ ಯಂತಹ ಕವಿತೆ, ಕೃತಿಗಳ ಕುರಿತಾಗಿ ಸವಿಸ್ತಾರವಾಗಿ ತಾವು ಗ್ರಹಿಸಿದ್ದನ್ನು ಮಕ್ಕಳು ದಾಖಲಿಸಿದ್ದಾರೆ.
ಈ ಪುಸ್ತಕವನ್ನು ಶುಕ್ರವಾರ ಕನ್ನಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ಅಂತರಶಾಲಾ ನಾಟಕೋತ್ಸವ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದ ಶಾಸನತಜ್ಞ ಡಾ. ಆರ್.ಶೇಷಶಾಸ್ತ್ರಿ, ‘ಡಿವಿಜಿ, ಮಾಸ್ತಿ ಅವರ ಬರಹಗಳನ್ನು ನಾನೆಷ್ಟು ಗೌರವಿಸುತ್ತೇನೆಯೋ, ಶಾಮಂತಿಯ ಲೇಖನಗಳನ್ನು ಕೂಡ ಅಷ್ಟೇ ಗೌರವಿಸುತ್ತೇನೆ. ಈ ಬರಹಗಳನ್ನು ಬರೆದಿರುವ ಮಕ್ಕಳು ಉತ್ತಮ ಸಾಹಿತಿಗಳಾಗದಿದ್ದರೂ ಒಳ್ಳೆಯ ಮನುಷ್ಯರಂತೂ ಖಂಡಿತ ಆಗುತ್ತಾರೆ. ಎಷ್ಟೋ ಜನಕ್ಕೆ ತಮ್ಮ ಭಾವನೆಗಳನ್ನು ಅಭಿವ್ಯಕ್ತಿಸಲು ಬರದು. ಆದರೆ ಈ ಮಕ್ಕಳು ತಮ್ಮ ಸುಖ, ದುಃಖ, ನೋವು ನಲಿವುಗಳನ್ನು ಹೇಳಿಕೊಳ್ಳಬಲ್ಲರು, ಬರೆಯಬಲ್ಲರು. ಈ ಸಂಸ್ಕಾರವನ್ನು ಒದಗಿಸಿರುವ ಇವರ ಶಿಕ್ಷಕರು ಮತ್ತು ಈ ಮಕ್ಕಳ ಭಾವನೆಗಳನ್ನು ಪುಸ್ತಕ ರೂಪದಲ್ಲಿ ತರುವ ಇಲ್ಲಿನ ಸ್ನೇಹ ಯುವಕ ಸಂಘದವರು ಮಾದರಿಯಾಗಿದ್ದಾರೆ. ಮಕ್ಕಳಿಗೆ ಅಭಿವ್ಯಕ್ತಿ, ಕೃತಜ್ಞತೆ ಮತ್ತು ಜಾನಪದ ಕತೆಗಳನ್ನು ತಮ್ಮದಾಗಿಸಿಕೊಳ್ಳುವುದನ್ನು ಕಲಿಸಿರುವ ಕನ್ನಮಂಗಲದ ಶಿಕ್ಷರು ಹಾಗೂ ಅವರ ಐಕ್ಯಮತ್ಯ ಅಭಿನಂದನೀಯ’ ಎಂದು ಹೇಳಿದರು.
ಶಾಮಂತಿಯಲ್ಲಿ ಮಕ್ಕಳು ಪ್ರಾಣಿ, ಪಕ್ಷಿ, ಗಿಡ, ಮರ, ಕೀಟಗಳ ಬಗ್ಗೆ ಬರೆದಿದ್ದಾರೆ. ಅಡುಗೆ, ಕೃಷಿ, ಕಣ, ದೇವಸ್ಥಾನ, ಹಬ್ಬ, ನಂಬಿಕೆಗಳು, ಪೂಜೆ, ನೋಡಿದ ಸಿನೆಮಾ, ಓದಿದ ಪುಸ್ತಕ, ಸರ್ಕಸ್ಸು, ನೋವು ನಲಿವು ದುಗುಡ ತಲ್ಲಣಗಳ ಬಗ್ಗೆಯೂ ಬರೆದಿದ್ದಾರೆ. ತಮ್ಮ ಶಾಲೆಯ ಅಂಗನವಾಡಿ ಸಹಾಯಕಿಯೊಳಗೆ ಪರಕಾಯ ಪ್ರವೇಶ ಮಾಡಿ ಆಕೆಯ ಮನಸ್ಸನ್ನು ಚಿತ್ರಿಸಿದ್ದಾರೆ. ತಾವು ನೋಡಿದ್ದು, ಆಡಿದ್ದು, ಅನುಭವಿಸಿದ್ದು, ತಿಂದಿದ್ದು, ಕುಡಿದಿದ್ದು, ಕುಣಿದಿದ್ದು, ಕೇಳಿದ್ದು ಎಲ್ಲವನ್ನೂ ಮುಚ್ಚುಮರೆಯಿಲ್ಲದೆಯೇ ಸರಾಗವಾಗಿ ಯಾವುದೇ ಹಿಂಜರಿಕೆಯಿಲ್ಲದೆ ಬರೆದಿದ್ದಾರೆ. ಓದುಗರ ಮನಸ್ಸನ್ನು ಆವರಿಸಿಕೊಳ್ಳುವ ಆಟದ ಅಂಗಳವನ್ನಾಗಿಸಿದ್ದಾರೆ.
ಶಾಮಂತಿ 4 ಕ್ಕೆ ಮುನ್ನುಡಿ ಬರೆದಿರುವ ಮುದ್ದು ತೀರ್ಥಹಳ್ಳಿ, ‘ಎಲ್ಲ ಶಾಲೆಗಳಲ್ಲೂ ಇಂಥಹ ಶಿಕ್ಷಕರಿದ್ದಲ್ಲಿ ಪ್ರತಿಯೊಂದು ಶಾಲೆಯಲ್ಲೂ ಶಾಮಂತಿ, ಅಬ್ಬಲಿಗೆ, ಮಲ್ಲಿಗೆ, ಜಾಜಿ, ಸುರಗಿ ಹೂವುಗಳೇನು ಹೂತೋಟವೇ ಮೈದಾಳಿ ಅರಳುತ್ತದೆ ಎನ್ನುವ ಗಟ್ಟಿಯಾದ ನಂಬಿಕೆ ನನಗಿದೆ. ಮಕ್ಕಳ ಭಾವನೆಗಳಿಗೆ ಬಾಯಿ ಮೂಡಿಸದಿದ್ದರೆ ಅವರೊಳಗನ್ನು ಅರಿಯುವುದಾದರೂ ಹೇಗೆ. ಇಂಥಹ ಬರಹಗಳನ್ನು ಮಕ್ಕಳು ಅಭಿವ್ಯಕ್ತಿಸಬೇಕಾದರೆ ಅದಕ್ಕೆ ಬೇಕಾಗುವ ಮುಕ್ತ ವಾತಾವರಣ ಸರ್ಕಾರಿ ಶಾಲೆಗಳಲ್ಲಿ ಮಾತ್ರ ಸಾಧ್ಯ. ಅದರಲ್ಲೂ ಸಂವೇದನಾಶೀಲ ಶಿಕ್ಷಕರಿದ್ದಲ್ಲಿ ಮಾತ್ರ ಅದು ಸಾಧ್ಯವಾಗಬಲ್ಲದು. ನಿಜವಾಗಿ ಕಲಿಕೆಯ ಮೌಲ್ಯಮಾಪನ ನಡೆಯಬೇಕಾಗಿರುವುದು ಪರೀಕ್ಷೆಗಳ ಅಂಕಗಳ ಮೂಲಕವಲ್ಲ, ಅದು ಶಾಮಂತಿಯಲ್ಲಿರುವಂತಹ ಬರಹಗಳಿಂದ’ ಎನ್ನುತ್ತಾರೆ.
ಇದೇ ಶಾಲೆಯಿಂದ ಮುಂದೊಂದು ದಿನ ಕಲಾವಿದೆಯರು, ಕತೆಗಾರರು, ಕವಿಗಳು, ನಟರು, ನಾಟಕಕಾರರು ಹುಟ್ಟಿದರೆ ಅವರೆಲ್ಲಾ ಖಂಡಿತಾ `ಶಾಮಂತಿ’ಯನ್ನೂ, ಅಲ್ಲಿನ ಮೇಷ್ಟ್ರುಗಳನ್ನೂ ನೆನೆಯದೇ ಇರುವುದಿಲ್ಲ.
ಮಕ್ಕಳಿರುವ ಮನೆಗಳಲ್ಲಿ ಇಂಥದ್ದೊಂದು ಪುಸ್ತಕ ಇರಲಿ. ಪುಸ್ತಕಕ್ಕಾಗಿ ಈ ನಂಬರ್ಗೆ ಫೋನ್ ಮಾಡಬಹುದು: 9900695142 ಅಥವಾ kaladhars152@gmail.com ಗೆ ಮೇಲ್ ಮಾಡಬಹುದು.
– ಡಿ.ಜಿ.ಮಲ್ಲಿಕಾರ್ಜುನ.