ರಸ್ತೆ ಕಾಮಗಾರಿಗೆ ಹೊಡೆದಿದ್ದ ಜಲ್ಲಿ ಕಲ್ಲುಗಳನ್ನು ರಾತ್ರೋ ರಾತ್ರಿ ಸಾಗಾಣಿಕೆ ಮಾಡಲು ಮುಂದಾಗಿದ್ದ ಕ್ಯಾಸಗೆರೆ ಗ್ರಾಮದ ಕೆಲವರನ್ನು ಅಡ್ಡಿಪಡಿಸಿದ್ದರಿಂದ ಮಹಿಳೆಯರು ಸೇರಿದಂತೆ ಹಕ್ಕಿ ಪಿಕ್ಕಿ ಕಾಲೋನಿಯ ಗ್ರಾಮಸ್ಥರ ಮೇಲೆ ಹಲ್ಲೆನಡೆಸಿದ್ದಾರೆ. ಅವರ ಮೇಲೆ ದೂರು ಸ್ವೀಕರಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂದು ಹಕ್ಕಿ-ಪಿಕ್ಕಿ ಗ್ರಾಮಸ್ಥರು ಪೊಲೀಸ್ ಠಾಣೆಯ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಹಕ್ಕಿಪಿಕ್ಕಿ ಕಾಲೋನಿಯ ಮೂಲಕ ಕ್ಯಾಸಗೆರೆ ಗ್ರಾಮದಿಂದ ಹಾದು ಹೋಗುವ ರಸ್ತೆ ತೀರಾ ಹದಗೆಟ್ಟಿದ್ದು, ಈ ರಸ್ತೆಯನ್ನು ದುರಸ್ಥಿಗೊಳಿಸಲು ಜಲ್ಲಿಕಲ್ಲುಗಳನ್ನು ಹೊಡೆದಿದ್ದರು. ಕ್ಯಾಸಗೆರೆ ಗ್ರಾಮದ ಕೆಲವು ಮಂದಿ ರಾತ್ರಿಯಲ್ಲಿ ಬಂದು ಜಲ್ಲಿಕಲ್ಲುಗಳನ್ನು ತೆಗೆದುಕೊಂಡು ಹೋಗಲು ಪ್ರಯತ್ನ ಮಾಡುತ್ತಿದ್ದಾಗ, ಯಾವುದೇ ಕಾರಣಕ್ಕೂ ಜಲ್ಲಿಯನ್ನು ಬೇರೆ ಕಡೆಗೆ ಸಾಗಿಸಲು ನಾವು ಅವಕಾಶ ಕೊಡುವುದಿಲ್ಲವೆಂದು ಅಡ್ಡಿಪಡಿಸಿದ್ದರಿಂದ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಕ್ಯಾಸಗೆರೆ ಗ್ರಾಮದ ಮೂಲಕ ಹಾದುಹೋಗಲು ಅವಕಾಶ ನೀಡದೇ ವಿನಾಕಾರಣ, ತೊಂದರೆ ಕೊಡುತ್ತಿದ್ದಾರೆ, ಪೊಲೀಸ್ ಠಾಣೆಗೆ ಬಂದು ದೂರು ನೀಡಲು ಮುಂದಾದರೂ ಪೊಲೀಸರು ಕಳೆದ ಮೂರು ದಿನಗಳಿಂದ ದೂರುಗಳನ್ನು ಸ್ವೀಕಾರ ಮಾಡುತ್ತಿಲ್ಲ. ಈ ಬಗ್ಗೆ ಸಬ್ಇನ್ಸ್ಪೆಕ್ಟರ್ ಅವರು, ನಾನು ರಜೆಯಲ್ಲಿದ್ದೇನೆ ಬಂದು ಮಾತನಾಡುತ್ತೇನೆ ದೂರು ಸ್ವೀಕಾರ ಮಾಡಬೇಡಿ ಎಂದು ಸಿಬ್ಬಂದಿಗೆ ತಿಳಿಸಿದ್ದಾರೆ ಎಂದು ಪ್ರತಿಭಟನೆ ನಡೆಸುತ್ತಿದ್ದ ನಾಗರಿಕರು ಆರೋಪಿಸಿದ್ದಾರೆ.
ಗ್ರಾಮ ಪಂಚಾಯತಿ ಸದಸ್ಯ ರಾಮ್ಬಾಬು, ಶೋಕ್ಬಾಬು, ಜಯರಾಮ್, ರಾಜಮ್ಮ, ಪ್ರಮೀಳಾ, ಸ್ನೇಹಾ, ನಂದಿನಿ, ಶ್ಯಾಮಲಾ, ಕೋಟೇಶ್, ಶ್ರೀನಿವಾಸ್ ಮತ್ತಿತರರು ಪ್ರತಿಭಟನೆಯಲ್ಲಿ ಹಾಜರಿದ್ದರು.