Home News ಪೊಲೀಸ್ ಪೇದೆಗಳಿಂದ ನಗರಸಭಾ ಸದಸ್ಯನ ಮೇಲೆ ಹಲ್ಲೆ

ಪೊಲೀಸ್ ಪೇದೆಗಳಿಂದ ನಗರಸಭಾ ಸದಸ್ಯನ ಮೇಲೆ ಹಲ್ಲೆ

0

ಪಾನಮತ್ತರಾಗಿ ಕಾರಿನ ತಪಾಸಣೆಯ ನೆಪದಲ್ಲಿ ಹಲ್ಲೆ ನಡೆಸಿರುವ ಪೊಲೀಸ್ ಪೇದೆಗಳನ್ನು ಅಮಾನತ್ತು ಪಡಿಸಿ, ಕಾನೂನು ಕ್ರಮ ಜರುಗಿಸಿ, ನ್ಯಾಯ ಒದಗಿಸಿಕೊಡಬೇಕು ಎಂದು ೧೮ ನೇ ವಾರ್ಡಿನ ನಗರಸಭಾ ಸದಸ್ಯ ಇಲಿಯಾಜ್ಬೇಗ್ ಒತ್ತಾಯಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಕಳೆದ ಫೆಬ್ರುವರಿ 11 ರಂದು ರಾತ್ರಿ, ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಬಶೆಟ್ಟಿಹಳ್ಳಿ ಬಳಿಯಿರುವ ಕೋಳಿಫಾರಂ ಬಳಿಗೆ ಕಾರ್ಮಿಕರನ್ನು ಕರೆದುಕೊಂಡು ಹೋಗುವಾಗ ನನ್ನ ಕಾರನ್ನು ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ಪೇದೆಗಳಾದ ದೇವರಾಜು ಮತ್ತು ಬೈರಾರೆಡ್ಡಿ ಎಂಬುವವರು ತಡೆದರು. ಕಾರನ್ನು ತಪಾಸಣೆ ಮಾಡಿದರು. ನಂತರ ಎಲ್ಲಿಗೆ ಹೋಗಿ ಬರುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದರು, ನಾನು ನಗರಸಭಾ ಸದಸ್ಯ, ನನ್ನ ಕೋಳಿಫಾರಂ ಬಳಿಗೆ ಹೋಗಿ ಬರುತ್ತಿರುವುದಾಗಿ ಹೇಳಿ, ನನ್ನ ಕಾರಿನ ದಾಖಲೆ ಪತ್ರಗಳು, ನನ್ನ ಗುರುತಿನ ಚೀಟಿ ಮುಂತಾದ ದಾಖಲೆಗಳನ್ನು ಕೊಟ್ಟರೂ ಕೂಡಾ ಪಾನಮತ್ತರಾಗಿದ್ದ ಪೇದೆಗಳು, ನಾನು ಹೇಳುವ ಯಾವ ಮಾತನ್ನೂ ಕೇಳಿಸಿಕೊಳ್ಳಲು ತಾಳ್ಮೆಇಲ್ಲದೆ, ಕಾರಿನೊಳಗಿಂದ ನನ್ನನ್ನು ಹೊರಗೆಳೆದು ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಕೂಡಲೇ ಬಶೆಟ್ಟಿಹಳ್ಳಿ ಗ್ರಾಮಸ್ಥರು ನನ್ನ ಸಹಾಯಕ್ಕೆ ಬಂದರು. ನಂತರ ನಾನು ದಿಬ್ಬೂರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಸಹಾ ಯಾವುದೇ ಕ್ರಮವನ್ನು ತೆಗೆದುಕೊಂಡಿರುವುದಿಲ್ಲ. ಈ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗೂ ದೂರು ನೀಡಿದ್ದರೂ ಕೂಡಾ ನಮ್ಮ ದೂರಿಗೆ ಅವರೂ ಸ್ಪಂದಿಸಿಲ್ಲವೆಂದು ಆರೋಪಿಸಿದರು.
ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಕಿಶನ್ (ನಂದು) ಮಾತನಾಡಿ, ಇತ್ತಿಚೆಗೆ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿನ ಸಿಬ್ಬಂದಿಗಳು ನಾಗರಿಕರೊಂದಿಗೆ ಗೌರವದಿಂದ ನಡೆದುಕೊಳ್ಳುತ್ತಿಲ್ಲ, ಪದೇ ಪದೇ ದುರ್ವರ್ತನೆ ಮಾಡುವ ಮೂಲಕ ಪೊಲೀಸ್ ಇಲಾಖೆಯ ಮೇಲೆ ನಾಗರಿಕರಿಗೆ ಇರುವ ನಂಬಿಕೆಯನ್ನು ಕೆಡಿಸುವಂತೆ ಮಾಡುತ್ತಿದ್ದಾರೆ, ನಗರಸಭಾ ಸದಸ್ಯರ ದೂರಿಗೆ ಪೊಲೀಸ್ ಇಲಾಖೆಯ ಜಿಲ್ಲಾ ವರಿಷ್ಟಾಧಿಕಾರಿ ಸ್ಪಂದಿಸಿ ನ್ಯಾಯ ಒದಗಿಸದಿದ್ದಲ್ಲಿ, ನಗರಸಭೆ ಎಲ್ಲಾ ಸದಸ್ಯರೂ ಸೇರಿದಂತೆ ನಾಗರಿಕರೊಂದಿಗೆ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಗರಸಭಾ ಸದಸ್ಯರಾದ ವೆಂಕಟಸ್ವಾಮಿ, ಕೇಶವಮೂರ್ತಿ, ಮುಖಂಡರಾದ ಮುಸ್ತು, ಜಬೀವುಲ್ಲಾ, ಲಕ್ಷ್ಮೀನಾರಾಯಣ, ನಾಮಿನಿ ಸದಸ್ಯ ಅಬ್ದುಲ್ಗಪೂರ್ ಈ ಸಂದರ್ಭದಲ್ಲಿ ಹಾಜರಿದ್ದರು.

error: Content is protected !!