ಪೊಲೀಸ್ ಸಿಬ್ಬಂದಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶ್ರೀರಾಮ ಸೇನಾ ಸಂಘಟನೆಯ ಸದಸ್ಯರು ಬುಧವಾರ ತಹಶೀಲ್ದಾರ್ ಮನೋರಮಾ ಅವರಿಗೆ ಮನವಿಯನ್ನು ಸಲ್ಲಿಸಿದರು.
ಪೊಲೀಸ್ ವ್ಯವಸ್ಥೆಯಿಲ್ಲದೆ ಸಮಾಜಕ್ಕೆ ಉಳಿಗಾಲವಿಲ್ಲ. ಅಸಂಘಟಿತರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅವರ ಸಮಸ್ಯೆಗಳನ್ನು ಸರ್ಕಾರ ಕಡೆಗಣಿಸಬಾರದು. ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪೊಲೀಸ್ ಸಿಬ್ಬಂದಿ ಸಾಮೂಹಿಕ ರಜಾ ಚಳುವಳಿಯನ್ನು ಜೂನ್ 4 ರಂದು ಹಮ್ಮಿಕೊಂಡಿದ್ದಾರೆ. ಈ ಚಳುವಳಿಗೆ ಮತ್ತು ಪೊಲೀಸ್ ಸಿಬ್ಬಂದಿಗೆ ಶ್ರೀರಾಮಸೇನೆ ಮತ್ತು ಕರ್ನಾಟಕ ಸಂಘಟನೆಯು ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸುತ್ತಿದೆ. ರಾಜ್ಯ ಸರ್ಕಾರ ಈ ಬಗ್ಗೆ ತಕ್ಷಣ ಗಮನಹರಿಸಿ ಪೊಲೀಸರ ಸಮಸ್ಯೆಗಳನ್ನು ಇತ್ಯರ್ಥಗೊಳಿಸಬೇಕೆಂದು ಮನವಿಯನ್ನು ಸಲ್ಲಿಸಿದರು.
ಶ್ರೀರಾಮಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣಸ್ವಾಮಿ, ಜಿಲ್ಲಾಧ್ಯಕ್ಷ ಮಂಜುನಾಥ, ಜಿಲ್ಲಾ ಕಾರ್ಯದರ್ಶಿ ಎನ್.ಜಿ.ಮಂಜುನಾಥ, ನಿಶಾಂತ್, ನಾಗರಾಜು, ಜಗದೀಶ್, ಮಧುಸೂದನ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.