ಪೊಲೀಸರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಹಾಗೂ ಅವರ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆಯೆಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿ.ಐ.ಟಿ.ಯು) ತಾಲ್ಲೂಕು ಸಮಿತಿಯ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪೊಲೀಸ್ ಇಲಾಖೆಯ ಪ್ರತಿಯೊಬ್ಬ ಸಿಬ್ಬಂದಿಯೂ ಸಮಯದ ಹಂಗಿಲ್ಲದೆ ಮಳೆ, ಗಾಳಿ, ಚಳಿ, ರಾತ್ರಿಯೆನ್ನದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಾಗರಿಕರ ಪ್ರಾಣ, ಆಸ್ತಿಗೆ ತೊಂದರೆಯಾಗದಂತೆ ಕರ್ತವ್ಯ ನಿರ್ವಹಣೆಯಲ್ಲಿ ಜೀವದ ಹಂಗು ಲೆಕ್ಕಿಸದೆ ನಿಷ್ಠೆಯಿಂದ ದುಡಿಯುತ್ತಿದ್ದಾರೆ. ಪ್ರಸ್ತುತ ಪೊಲೀಸ್ ಸಿಬ್ಬಂದಿ ದ್ವಿತೀಯ ದರ್ಜೆಯ ಗುಮಾಸ್ತನ ವೇತನ ಶ್ರೇಣಿಗಿಂತ ಕಡಿಮೆ ಸಂಬಳ ಪಡೆಯುತ್ತಿದ್ದಾರೆ. ಇದರಿಂದ ಅವರ ಕುಟುಂಬದ ನಿರ್ವಹಣೆ ಕಷ್ಟಕರವಾಗಿದೆ. ಅವರ ಹಲವು ಬೇಡಿಕೆಗಳು ನ್ಯಾಯಯುತವಾಗಿದ್ದು ಅವನ್ನು ಸರ್ಕಾರ ತಕ್ಷಣ ಈಡೇರಿಸಬೇಕು. ಸಿ.ಐ.ಟಿ.ಯು ಸಂಘಟನೆಯು ಪೊಲೀಸ್ ಸಿಬ್ಬಂದಿಯ ಪರವಾಗಿ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.