Home News ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ

ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ

0

ನಗರದ ಚಿಂತಾಮಣಿ ರಸ್ತೆಯಲ್ಲಿರುವ ನಗರಸಭೆ ಉದ್ಯಾನವನದಲ್ಲಿ ನಗರಸಭೆಯಿಂದ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ತಹಶೀಲ್ದಾರ್ ಎಂ.ದಯಾನಂದ್ ಮಾತನಾಡಿದರು.
ಪೌರ ಕಾರ್ಮಿಕರು ನಗರದ ಜೀವನಾಡಿಗಳಾಗಿದ್ದಾರೆ. ನಗರದಲ್ಲಿ ರೋಗ ರುಜನಿಗಳು ಹರಡದಂತೆ ಪೌರ ಕಾರ್ಮಿಕರು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಪೌರರ ಆರೋಗ್ಯವನ್ನು ಕಾಪಾಡಲು ಕಾರ್ಯನಿರ್ವಹಿಸುತ್ತಾರೆ ಎಂದು ಅವರು ತಿಳಿಸಿದರು.
ಪೌರ ಕಾರ್ಮಿಕರು ಸಮಾಜದ ಮುಖ್ಯ ವಾಹಿನಿಯೊಂದಿಗೆ ಸಮನಾಗಿ ಸಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಹಲವು ಯೋಜನೆಗಳನ್ನು, ಸೌಲಭ್ಯಗಳನ್ನು ನೀಡುತ್ತಿದೆ. ಇವುಗಳ ಸದುಪಯೋಗ ಪಡೆದು ಉತ್ತಮ ಜೀವನ ರೂಪಿಸಿಕೊಳ್ಳಬೇಕು. ನಗರದ ಸ್ವಚ್ಛತೆಯನ್ನು ಕಾಪಾಡುವ ಪೌರಕಾರ್ಮಿಕರ ಸೇವೆ ಗಮನಾರ್ಹವಾದುದು, ಅವರನ್ನು ಗೌರವದಿಂದ ಕಾಣಬೇಕು ಎಂದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, ಸಮಾಜದಲ್ಲಿ ಸ್ವಚ್ಛತೆ ಕಾಪಾಡಲು ಶ್ರಮಿಸುವ ಪೌರ ಕಾರ್ಮಿಕರು ತಮ್ಮ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ನೀಡಬೇಕು. ಇಂದು ಶ್ರಮಿಕ ವರ್ಗದ ಹಲವು ಜನರು ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಹೀಗಾದರೆ ಕೇವಲ ಆರೋಗ್ಯಕ್ಕೊಂದೇ ಹಾನಿಯಾಗದೆ ಇಡೀ ಸಮಾಜ ಅಸ್ವಸ್ಥವಾಗುವ ಆತಂಕ ಇದೆ. ಕಾರಣ ದುಶ್ಚಟಗಳಿಂದ ಮುಕ್ತವಾಗಬೇಕಾದ ಅವಶ್ಯಕತೆ ಇದೆ. ತಮ್ಮ ನಿತ್ಯ ಕಾರ್ಯದಲ್ಲಿ ಸುರಕ್ಷತಾ ಸಾಧನಗಳನ್ನು ಧರಿಸಿ ಕೆಲಸ ಮಾಡಬೇಕು ಎಂದು ಹೇಳಿದರು.
ನಿವೃತ್ತ ಪೌರಕಾರ್ಮಿಕ ಬ್ಯಾಟಪ್ಪ, ಪೌರಕಾರ್ಮಿಕರಾದ ಚಿನ್ನಮ್ಮ, ಸರೋಜಮ್ಮ, ಯಲ್ಲಮ್ಮ, ನಾಗರಾಜ್, ನಾರಾಯಣಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ನೀರಿನ ಸಂರಕ್ಷಣೆ ಹಾಗೂ ಮಿತ ಬಳಕೆಯ ಕುರಿತಂತೆ ಕಾರ್ಯಕ್ರಮದಲ್ಲಿ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು.
ಸರ್ಕಲ್ ಇನ್ಸ್ ಪೆಕ್ಟರ್ ಆನಂದ್, ಪೌರಾಯುಕ್ತ ಶ್ರೀಕಾಂತ್, ದಿಲೀಪ್, ನಗರಸಭಾ ಸದಸ್ಯರು ಹಾಜರಿದ್ದರು.

error: Content is protected !!