ತಾಲ್ಲೂಕಿನ ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಈಚೆಗೆ ಸಿಎಮ್ಸಿಎ ಸಂಸ್ಥೆಯ ಜೀವನ ಕೌಶಲ್ಯಧಾರಿತ ಸಕ್ರಿಯ ನಾಗರಿಕತ್ವ ರೂಪಿಸುವ ಪೌರಕ್ಲಬ್ಗಳ ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮುತ್ತೂರು, ಮಳ್ಳೂರು ಹಾಗೂ ಜಂಗಮನಕೋಟೆಯ ಮೂರೂ ಸರ್ಕಾರಿ ಪ್ರೌಢ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ಸಿಎಮ್ ಸಿಎ ಸಂಸ್ಥೆಯ ಪೌರಕ್ಲಬ್ಗಳ ಉದ್ಘಾಟನೆಯನ್ನು ಮಳ್ಳೂರು ಗ್ರಾಮ ಪಂಚಾಯತಿ ಅಧ್ಯಕ್ಷರು ಸಿಎಮ್ಸಿಎ ಪೌರಕ್ಲಬ್ ಸದಸ್ಯರಿಗೆ ಬ್ಯಾಡ್ಜ್ನ್ನು ಹಾಕುವುದರ ಮುಖಾಂತರ ಚಾಲನೆ ನೀಡಲಾಯಿತು.
ಸಿಎಮ್ಸಿಎ ಸಂಸ್ಥೆಯ ರೀಜಿನಲ್ ಮುಖ್ಯಸ್ಥ ಪಿ.ಆರ್. ಮರುಳಪ್ಪ ಮಾತನಾಡಿ, ಸಿಎಮ್ಸಿಎ ಸಂಸ್ಥೆಯು ಮುತ್ತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ೬ ವರ್ಷಗಳ ಹಿಂದೆ ತನ್ನ ಪ್ರಥಮ ಗ್ರಾಮೀಣ ಪೌರಕ್ಲಬ್ನ್ನು ಆರಂಭಮಾಡಿತ್ತು . ಈಗ ಐದು ಶಾಲೆಗಳಲ್ಲಿ ಸಂಸ್ಥೆಯ ಕಾರ್ಯಕ್ರಮ ನಡೆಯುತ್ತಿದೆ. ನಮ್ಮ ಕಾರ್ಯಕ್ರಮದ ಮುಖಾಂತರ ವಾರದ ತರಗತಿಗಳಲ್ಲಿ ಜೀವನ ಕೌಶಲ್ಯಗಳು, ಪೌರ ಹಾಗೂ ಪ್ರಜಾಪ್ರಭುತ್ವಕ್ಕೆ ಸಂಬಂಧಿಸಿದ ವಿಷಯಗಳನ್ನು ಕುರಿತಾಗಿ ಮಕ್ಕಳನ್ನು ಸಂವೇದನಾಶೀಲರನ್ನಾಗಿಸಿ, ತನ್ಮೂಲಕ ಸಮಾನತೆ ಹಾಗೂ ಜೀವನದ ಗುಣಮಟ್ಟವನ್ನು ಸುಧಾರಿಸುವತ್ತ ಸಿಎಮ್ಸಿಎ ತೊಡಗಿದೆ ಎಂದರು.
ವಾರದ ತರಗತಿಗಳಲ್ಲಿ ಫ್ಲಾಶ್ ಕಾರ್ಡ್ಸ್, ಬ್ಯಾನರ್ಸ್, ವೀಡಿಯೋ ಪ್ರದರ್ಶನ, ಚರ್ಚೆಗಳು ಇನ್ನಿತರ ಬೋಧನಾ ಸಾಧನಗಳನ್ನು ಬಳಸಲಾಗುವುದು. ಅಲ್ಲದೇ ಪ್ರೇರೇಪಣೆ ಮೂಡಿಸುವ ಪರಿಣಾಮಕಾರಿ ಕಥೆಗಳನ್ನು ಸಹ ಮಕ್ಕಳಿಗೆ ಹೇಳಲಾಗುವುದು. ಆ ಮುಖಾಂತರ ಕಲಿಕೆಯ ಪ್ರಕ್ರಿಯೆಯನ್ನು ಆಸಕ್ತಿಗೊಳಿಸಿ ಮಕ್ಕಳು ಭಾಗವಹಿಸಿ, ಕಲಿಯುವಂತೆ ಮಾರ್ಗದರ್ಶನ ಮಾಡಲಾಗುತ್ತದೆ. ನವಂಬರ್ ತಿಂಗಳಿನಲ್ಲಿ ಮಕ್ಕಳ ಗ್ರಾಮ ಸಭೆಯನ್ನು ಆಯೋಜಿಸಿ ಮಕ್ಕಳು ಮತ್ತು ಜನಪ್ರತಿನಿಧಿಗಳ ಜೊತೆ ಸಂವಾದ ಏರ್ಪಡಿಸಲಾಗುವುದು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಮಳ್ಳೂರು ಮತ್ತು ಜಂಗಮಕೋಟೆ ಶಾಲೆಗಳ ವಿದ್ಯಾರ್ಥಿಗಳು ಸಮಾಜದ ಕುರಿತಂತೆ ಕಾಳಜಿ ಮೂಡಿಸುವ ಕಿರು ನಾಟಕಗಳನ್ನು ಪ್ರದರ್ಶಿಸಿದರು. ಕಳೆದ ವರ್ಷದಲ್ಲಿ ಸಿಎಮ್ಸಿಎ ವಾರದ ತರಗತಿಗಳಿಂದ ಪ್ರೇರೇಪಿತರಾಗಿ ಹಳ್ಳಿಯ ಕೆಲವು ಸಮಸ್ಯೆಗಳನ್ನು ಬಗೆಹರಿಸಲು ಗ್ರಾಮ ಪಂಚಾಯತಿಗೆ ಪತ್ರ ಬರೆದ ಒಂಭತ್ತು ಮಕ್ಕಳನ್ನು ಅಭಿನಂದಿಸಲಾಯಿತು.
ಜಿಲ್ಲಾ ಶೈಕ್ಷಣಿಕ ಅಧಿಕಾರಿ ನಾಗರತ್ನ, ಮಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಶಕುಂತಲಮ್ಮ, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹಾಜರಿದ್ದರು.