ನಗರ, ಪಟ್ಟಣಗಳ ನೈರ್ಮಲ್ಯ ಮತ್ತು ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಗುರುತರ ಕೆಲಸ ನಿರ್ವಹಿಸುವ ನಮ್ಮ ನಡುವಿನ ಪೌರ ಕಾರ್ಮಿಕರ ಆರೋಗ್ಯ ಮತ್ತು ಕಲ್ಯಾಣ ಹೇಳಿಕೊಳ್ಳುವಷ್ಟು ಸುಧಾರಣೆ ಕಂಡಿಲ್ಲ. ಅವರನ್ನು ಗುರುತಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಮುಖಂಡ ದೇವರಾಜ್(ದೇವಿ) ತಿಳಿಸಿದರು.
ನಗರದ ಮೂರನೇ ವಾರ್ಡಿನಲ್ಲಿ ರೇಣುಕಾ ಎಲ್ಲಮ್ಮ ದೇವಾಲಯದ ಬಳಿ ಭಾನುವಾರ ನಾಲ್ವರು ಪೌರಕಾರ್ಮಿಕರಿಗೆ ಪಾದಪೂಜೆಯನ್ನು ಮಾಡಿ, “ಹಸಿರೇ ಉಸಿರು – ಮನೆಗೊಂದು ಗಿಡ, ಊರಿಗೊಂದು ವನ” ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
“ಮಳೆಯಿರಲಿ, ಚಳಿಯಿರಲಿ, ಊರು ಮಾತ್ರ ಸ್ವಚ್ಛವಿರಲಿ” ಎಂದು ಎಲ್ಲರೂ ಬಯಸುತ್ತಾರೆ. ಆದರೆ, ಊರನ್ನು ಸ್ವಚ್ಛಗೊಳಿಸುವವರು ಯಾರು, ಅವರ ಬವಣೆ ಏನು ಎಂಬುದರ ಬಗ್ಗೆ ಯಾರೂ ಚಿಂತಿಸುವುದಿಲ್ಲ. ಸಾರ್ವಜನಿಕರು ನಿಶ್ಚಿಂತೆಯಿಂದ ಮನೆಯಲ್ಲಿ ಮಲಗಿರುವಾಗ ಪೌರಕಾರ್ಮಿಕರು ಬೆಳಗಿನ ಜಾವವೇ ಎದ್ದು ನಗರವನ್ನು ಸ್ವಚ್ಛಗೊಳಿಸುವರು. ಊರನ್ನು ನಮ್ಮ ಊರು, ನಮ್ಮ ಜನ, ನಾವೆಲ್ಲ ಒಂದೇ ಎಂಬ ಭಾವನೆಯನ್ನು ಶ್ರಮಿಕರನ್ನು ಗೌರವಿಸುವ ಮೂಲಕ ತೋರಿಸುತ್ತಿರುವುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಪೌರಕಾರ್ಮಿಕರಾದ ಮುನಿರತ್ನಮ್ಮ, ಲಕ್ಷ್ಮಮ್ಮ, ಅಣ್ಣಯ್ಯಪ್ಪ ಮತ್ತು ಶ್ರೀರಾಮಣ್ಣ ಅವರಿಗೆ ಮುಖಂಡ ದೇವರಾಜ್(ದೇವಿ) ಪಾದಪೂಜೆ ನೆರವೇರಿಸಿದರು. ಮೂರನೇ ವಾರ್ಡಿನಲ್ಲಿ ಮನೆಗಳ ಬಳಿ ಗಿಡವನ್ನು ನೆಟ್ಟು ಪೋಷಿಸಿ ಪರಿಸರಕ್ಕೆ ತಮ್ಮ ಕಿರು ಕಾಣಿಕೆಯನ್ನು ಪ್ರತಿಯೊಬ್ಬರೂ ಸಲ್ಲಿಸುವಂತೆ ಕೋರಿ ಗಸಗಸೆ, ನೇರಳೆ, ಮಹಾಗನಿ ಗಿಡಗಳನ್ನು ಮನೆಮನೆಗೂ ವಿತರಿಸಿದರು.
ರಂಜಿತ್, ಮಂಜುನಾಥ್, ಶ್ರವಣ್ ಹಾಜರಿದ್ದರು.