Home News ಪೌಷ್ಟಿಕ ಆಹಾರದ ಸೇವನೆ ನಮ್ಮ ಹಕ್ಕು

ಪೌಷ್ಟಿಕ ಆಹಾರದ ಸೇವನೆ ನಮ್ಮ ಹಕ್ಕು

0

ಉತ್ತಮ ಆರೋಗ್ಯ ರಕ್ಷಣೆ ನಿಟ್ಟಿನಲ್ಲಿ ಪೌಷ್ಟಿಕ ಆಹಾರಗಳ ಸೇವನೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಸದಾ ಜಾರಿಯಲ್ಲಿರಲಿ ಎಂದು ಜಂಗಮಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಂಬಿಕಾ ತಿಳಿಸಿದರು.
ತಾಲ್ಲೂಕಿನ ಜಂಗಮಕೋಟೆಯ ಸಮುದಾಯಭವನದಲ್ಲಿ ಮಂಗಳವಾರ ನಡೆದ ಹೋಬಳಿ ಮಟ್ಟದ ಪೌಷ್ಟಿಕ ಆಹಾರ ಸಪ್ತಾಹವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸೆಪ್ಟೆಂಬರ್ ಮೊದಲ ವಾರವನ್ನು ‘ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ’ವನ್ನಾಗಿ ಆಚರಿಸಲಾಗುತ್ತದೆ. ನಮ್ಮ ಆರೋಗ್ಯ ನಾವು ತಿನ್ನುವ ಆಹಾರವನ್ನೇ ಅವಲಂಬಿಸಿದೆ. ಪೌಷ್ಟಿಕ ಆಹಾರದ ಸೇವನೆ ನಮ್ಮ ಆರೋಗ್ಯಜೀವನಕ್ಕೆ ಮುಖ್ಯ ಅಷ್ಟೇ ಅಲ್ಲ, ಅದು ನಮ್ಮ ಹಕ್ಕು ಕೂಡ. ಈ ಬಗ್ಗೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಜನರಿಗೆ ತಿಳಿಸಬೇಕಿದೆ ಎಂದು ಹೇಳಿದರು.
ಉತ್ತಮ ಆರೋಗ್ಯಕ್ಕಾಗಿ ಆಹಾರ ಸೇವನಾ ಕ್ರಮಗಳ ಬಗ್ಗೆ ಅವರು ಮಾಹಿತಿ ನೀಡಿದರು. ಪರಿಸರದಲ್ಲಿ ದೊರೆಯುವ ಹಸಿರು ತರಕಾರಿ, ಸೊಪ್ಪುಗಳಲ್ಲಿ ಆರೋಗ್ಯ ರಕ್ಷಣೆಗೆ ಅಗತ್ಯವಿರುವ ವಿಟಮಿನ್ ಗಳು ಅತೀ ಹೆಚ್ಚು ಪ್ರಮಾಣದಲ್ಲಿ ಸಿಗುವುದರಿಂದ ಇವುಗಳನ್ನು ಹೆಚ್ಚು ಹೆಚ್ಚು ಬಳಕೆ ಮಾಡುವಂತೆ ಅವರು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ವಿವಿಧ ತರಕಾರಿ, ಸೊಪ್ಪು, ಕಾಳು ಬೇಳೆಗಳನ್ನು ಪ್ರದರ್ಶಿಸಿ ಅವುಗಳಲ್ಲಿರುವ ದೇಹಕ್ಕೆ ಬೇಕಾದ ಅಗತ್ಯ ಅಂಶಗಳ ಬಗ್ಗೆಯೂ ತಿಳಿಸಲಾಯಿತು.
ಡಾ.ಮೇಘಶ್ರೀ, ಮೇಲ್ವಿಚಾರಕಿರಾದಮ್ಮ, ಮೇರಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.