ಗ್ರಾಹಕರಿಗೆ ಉತ್ತಮವಾದ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕಿನ ಎ.ಟಿ.ಎಂ.ಕೇಂದ್ರವನ್ನು ತೆರೆದಿದ್ದು, ಗ್ರಾಹಕರು ಹಣದ ವ್ಯವಹಾರವನ್ನು ಮಾಡಲು ಅನುಕೂಲವಾಗಲಿದೆ ಎಂದು ವ್ಯವಸ್ಥಾಪಕ ಕೆ.ಎಂ.ಬಸವರಾಜ್ ಹೇಳಿದರು.
ನಗರದ ಟಿ.ಬಿ.ರಸ್ತೆಯಲ್ಲಿ ಸೋಮವಾರ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕಿನ ಎ.ಟಿ.ಎಂ.ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಹುತೇಕ ಯೋಜನೆಗಳನ್ನು ರೈತರಿಗೆ ಬ್ಯಾಂಕುಗಳ ಮೂಲಕವೇ ವಿತರಣೆ ಮಾಡುತ್ತಿರುವುದರಿಂದ ಬ್ಯಾಂಕುಗಳಲ್ಲಿ ಬೇರೆ ಗ್ರಾಹಕರಿಗೆ ಹಣಕಾಸಿನ ವ್ಯವಹಾರಕ್ಕೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಎ.ಟಿ.ಎಂ. ಕೇಂದ್ರವನ್ನು ತೆರೆಯಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸಿ.ಸಿ.ಕ್ಯಾಮಾರಾ ಅಳವಡಿಸಲಾಗಿದೆ. ಗ್ರಾಹಕರಿಗೆ ಯಾವುದೇ ರೀತಿಯ ತಾಂತ್ರಿಕದೋಷಗಳು ಕಂಡುಬಂದರೂ ಕೂಡಾ ತಕ್ಷಣ ಅಂತಹ ಸಮಸ್ಯೆಯನ್ನು ಬಗೆಹರಿಸುವಂತಹ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಗ್ರಾಹಕರು ಹೆಚ್ಚಿನ ಸಹಕಾರ ನೀಡಿ, ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿರುವವರು, ಎ.ಟಿ.ಎಂ.ಕಾರ್ಡುಗಳಿಗೆ ಅರ್ಜಿ ಸಲ್ಲಿಸಿದರೆ, ವಿತರಣೆ ಮಾಡಲಾಗುತ್ತದೆ. ಗ್ರಾಹಕರು ಎ.ಟಿ.ಎಂ.ಕೇಂದ್ರದಲ್ಲಿ ವ್ಯವಹರಿಸುವಾಗ ತಮಗೆ ನೀಡಿರುವ ಪಿನ್ ನಂಬರ್ಗಳನ್ನು ಗೌಪ್ಯವಾಗಿಟ್ಟುಕೊಂಡು ವ್ಯವಹರಿಸಬೇಕಾಗುತ್ತದೆ. ಅಪರಿಚಿತ ವ್ಯಕ್ತಿಗಳು ಎ.ಟಿ.ಎಂ.ಗಳ ಸಮೀಪದಲ್ಲಿ ಕಾಣಿಸಿಕೊಳ್ಳುವಾಗ ಮುಂಜಾಗ್ರತೆ ವಹಿಸಬೇಕು ಎಂದರು.
ಬ್ಯಾಂಕ್ ಸಿಬ್ಬಂದಿ ಬಿ.ಆರ್.ನಟರಾಜ್, ಪ್ರಸನ್ನಕುಮಾರ್, ನಾರಾಯಣಸ್ವಾಮಿ, ಬೀರಯ್ಯ, ಲಕ್ಷ್ಮೀದೇವಿ, ನಾಗಭೂಷಣರಾವ್, ಕಲಾವತಿ, ವಕೀಲ ಯೋಗಾನಂದ್, ದಡಂಘಟ್ಟ ತಿರುಮಲೇಶ್, ಶಿವಶಂಕರ್, ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.