ಪ್ರಚೋದಾತ್ಮಕ ಹಾಗೂ ದ್ವಂದ್ವ ಹೇಳಿಕೆಗಳನ್ನು ನೀಡುತ್ತಿರುವ ಸಾಹಿತಿ ಗಿರೀಶ್‌ಕಾರ್ನಾಡ್ ಅವರಿಂದ ಜ್ಞಾನಪೀಠ ಪ್ರಶಸ್ತಿಯನ್ನು ವಾಪಸ್ಸು ಪಡೆಯಬೇಕು ಹಾಗೂ ಗಡೀಪಾರು ಮಾಡಬೇಕೆಂದು ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ ಒತ್ತಾಯಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಳೆದ ನವೆಂಬರ್ ೧೦ ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಟಿಪ್ಪುಸುಲ್ತಾನ್ ಜಯಂತಿ ಕಾರ್ಯಕ್ರಮದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಟಿಪ್ಪುಸುಲ್ತಾನ್ ಹೆಸರಿಡಬೇಕು, ಟಿಪ್ಪುಸುಲ್ತಾನ್ ಸರಿಸಮಾನರಾದ ಕನ್ನಡಿಗರಿಲ್ಲ ಎಂಬ ವಿವಾದಾತ್ಮಕವಾದ ಹೇಳಿಕೆಯನ್ನು ನೀಡಿರುವ ಸಾಹಿತಿ ಗಿರೀಶ್‌ಕಾರ್ನಾಡ್ ಅವರು ಸಮಾಜದ ಶಾಂತಿಯನ್ನು ಕದಡುತ್ತಿದ್ದಾರೆ.
ವಿಧಾನಸೌಧದ ಸರ್ಕಾರಿ ಕಾರ್ಯಕ್ರಮದಲ್ಲಿ ನೀಡಿರುವ ಈ ಹೇಳಿಕೆಗೆ ರಾಜ್ಯಸರ್ಕಾರ ಬೆಂಬಲ ನೀಡಿದೆ, ಇದರಿಂದಾಗಿ ರಾಜ್ಯದ ಪ್ರತಿಯೊಬರ ಮನಸ್ಸಿಗೆ ನೋವಾಗಿದೆ, ಕೆಂಪೇಗೌಡರು ಟಿಪ್ಪುಸುಲ್ತಾನರಂತೆ ಸ್ವಾತಂತ್ರ್ಯ ಹೋರಾಟಗಾರರಲ್ಲ ಎಂಬ ಪ್ರಚೋದನಕಾರಿ ಹೇಳಿಕೆಯನ್ನು ನೀಡುವ ಮೂಲಕ ರಾಜ್ಯದ ಜನತೆಯನ್ನು ಅವಮಾನಿಸಿದ್ದಾರೆ, ಕೆಂಪೇಗೌಡರು ಬೆಂಗಳೂರನ್ನು ಕಟ್ಟಿದಾಗ ಬ್ರಿಟೀಷರು ಭಾರತದಲ್ಲಿ ವಸಾಹಾತನ್ನು ಪ್ರಾರಂಭಿಸಿರಲಿಲ್ಲ ಎಂಬ ಕನಿಷ್ಠ ಜ್ಞಾನವೂ ಅವರಿಗಿಲ್ಲ. ವೇದಿಕೆಯಲ್ಲಿ ಅವರ ಮಾತನ್ನು ತಡೆಯಬೇಕಾಗಿದ್ದ ಮುಖ್ಯಮಂತ್ರಿಗಳು ಹಾಗೂ ಇತರ ಜನಪ್ರತಿನಿಧಿಗಳು ಮೌನಕ್ಕೆ ಶರಣಾಗಿದ್ದದ್ದು, ಪರೋಕ್ಷವಾಗಿ ಸಾಹಿತಿಯ ಮಾತಿಗೆ ಸಮ್ಮತಿ ಸೂಚಿಸಿದಂತಾಗಿದೆ. ಈಗಾಗಲೇ ರಾಜ್ಯಾದ್ಯಂತ ಹೋರಾಟಗಳು ತೀವ್ರಗೊಳ್ಳುತ್ತಿದ್ದು, ೩ ಜನರ ಪ್ರಾಣಹಾನಿಯಾಗಿದೆ. ಕೂಡಲೇ ಸಾಹಿತಿಯಿಂದ ಪ್ರಶಸ್ತಿಯನ್ನು ವಾಪಸ್ಸು ಪಡೆದುಕೊಂಡು, ಅವರನ್ನು ರಾಜ್ಯದಿಂದ ಹೊರಹಾಕಬೇಕು, ಒಂದು ವೇಳೆ ಸರ್ಕಾರ ರಾಜ್ಯದ ಜನತೆಯ ಮನವಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟಕ್ಕೆ ಸಿದ್ದರಾಗುತ್ತೇವೆ ಎಂದು ಹೇಳಿದರು.
ಒಕ್ಕಲಿಗರ ಸಂಘದ ಕಾರ್ಯದರ್ಶಿ ಕೆಂಪರೆಡ್ಡಿ, ಕೆ.ಎನ್.ಸುಬ್ಬಾರೆಡ್ಡಿ, ಚನ್ನಕೇಶವಪ್ಪ, ಕೃಷ್ಣಪ್ಪ, ಪಿ.ವಿ.ಶ್ರೀನಿವಾಸ್, ಸಿ.ಎ.ದೇವರಾಜ್, ಭಕ್ತರಹಳ್ಳಿ ಲಕ್ಷ್ಮೀನಾರಾಯಣಪ್ಪ, ವಿಶ್ವನಾಥ್, ಗಂಗಾಧರ್, ಲಕ್ಕಹಳ್ಳಿ ದೇವರಾಜ್, ಡಿ.ಬಿ.ಶ್ರೀನಿವಾಸರೆಡ್ಡಿ, ದೇವಿರಪ್ಪ, ಅಶ್ವಥ್, ಕೇಶವಪ್ಪ ಮತ್ತಿತರರು ಹಾಜರಿದ್ದರು.