Home News ಪ್ರಜಾಪ್ರಭುತ್ವ ಉಳಿಸುವ ಕಡೆಗೆ – ಆನೆಯ ನಡಿಗೆ

ಪ್ರಜಾಪ್ರಭುತ್ವ ಉಳಿಸುವ ಕಡೆಗೆ – ಆನೆಯ ನಡಿಗೆ

0

ದೇಶದಲ್ಲಿ ಸರ್ವರಿಗೂ ಸಮಾನ ಅವಕಾಶ ನೀಡಬಲ್ಲ ಪವಿತ್ರ ಪ್ರಜಾಪ್ರಭುತ್ವ ಜಾರಿಗೆ ತರಲು ಬಿಎಸ್ಪಿ ಪಕ್ಷದಿಂದ ಮಾತ್ರ ಸಾಧ್ಯ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಸಂಯೋಜಕ ಪ್ರೊ.ಹರಿರಾಮ್ ತಿಳಿಸಿದರು.
ಬಹುಜನ ಸಮಾಜ ಪಕ್ಷ ತಾಲ್ಲೂಕು ಘಟಕದಿಂದ ಶುಕ್ರವಾರ ಆಯೋಜಿಸಲಾಗಿದ್ದ ಪ್ರಜಾಪ್ರಭುತ್ವ ಉಳಿಸುವ ಕಡೆಗೆ – ಆನೆಯ ನಡಿಗೆ ಜನಾಂದೋಲನ ಬೈಕ್ ರ್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸುಮಾರು ೫೦ ವರ್ಷಗಳಿಗೂ ಹೆಚ್ಚುಕಾಲ ಈ ದೇಶವನ್ನಾಳಿದ ಕಾಂಗ್ರೆಸ್ ಪಕ್ಷ ಜನರಿಗೆ ಉತ್ತಮ ಶಿಕ್ಷಣ, ಉದ್ಯೋಗ, ಭೂಮಿ ಹಾಗೂ ಬಂಡವಾಳಗಳನ್ನು ಒದಗಿಸುವ ಯೋಜನೆ ಬಿಟ್ಟು ಅನ್ನಭಾಗ್ಯ, ಕ್ಷೀರಭಾಗ್ಯ, ತಾಳಿಭಾಗ್ಯದಂತಹ ಯೋಜನೆಗಳನ್ನು ಜಾರಿ ಮಾಡುವ ಮೂಲಕ ದೇಶದಲ್ಲಿ ಬಹುಸಂಖ್ಯಾತರನ್ನು ದೈನೇಸಿಗಳನ್ನಾಗಿ ಮಾಡುತ್ತಿದೆ. ಇನ್ನು ಬಿಜೆಪಿ ಸರ್ಕಾರ ಬಡತನ, ನಿರುದ್ಯೋಗ, ಅಪೌಷ್ಟಿಕತೆಯಂತಹ ಜ್ವಲಂತ ಸಮಸ್ಯೆಗಳನ್ನು ನಿರ್ಲಕ್ಷಿಸಿ ಜಾತಿ-ಜಾತಿಗಳ ಮಧ್ಯೆ ಜಗಳ ಹಚ್ಚಿ ಕೋಮುಗಲಭೆಗಳನ್ನು ಸೃಷ್ಟಿಸುತ್ತಿದೆ ಎಂದರು.
ಸರ್ವರಿಗೂ ಸಮಾನ ಅವಕಾಶಗಳು ದೊರಕಲು ಬಿಎಸ್ಪಿ ಪಕ್ಷದಿಂದ ಮಾತ್ರ ಸಾಧ್ಯ. ಹಾಗಾಗಿ ಇದೇ ಜನವರಿ ೨೮ ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಯಲಿರುವ ಬೃಹತ್ ರಾಜ್ಯ ಸಮಾವೇಶದಲ್ಲಿ ತಾಲ್ಲೂಕಿನಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಭಾಗವಹಿಸಬೇಕು. ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಎಸ್ಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ರಾಜ್ಯದ ಅಭಿವೃದ್ಧಿಗೆ ಸಹಕರಿಸುವಂತೆ ನಾಗರಿಕರಲ್ಲಿ ಮನವಿ ಮಾಡಿದರು.
ಬಿಎಸ್ಪಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ನಾಗಪ್ಪ, ಕಚೇರಿ ಕಾರ್ಯದರ್ಶಿ ಲಕ್ಷ್ಮಕ್ಕ, ಜಿಲ್ಲಾಧ್ಯಕ್ಷ ಗುರ್ರಪ್ಪ, ತಾಲ್ಲೂಕು ಸಂಚಾಲಕ ಕೆ.ಮೂರ್ತಿ, ಅಧ್ಯಕ್ಷ ವೆಂಕಟೇಶ್, ಮುಖಂಡರಾದ ಯಾಮೇಗೌಡ, ದೇವರಾಜ್, ನರೇಶ್, ಶ್ರೀನಿವಾಸ್, ಮಂಜುನಾಥ್ ಹಾಜರಿದ್ದರು.