Home News ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

0

ಕನ್ನಡ ಭಾಷೆಯಲ್ಲಿ ಶೇಕಡಾ ನೂರರಷ್ಟು ಅಂಕಗಳನ್ನು ಪಡೆದಿರುವ ಮಕ್ಕಳನ್ನು ಪುರಸ್ಕರಿಸುತ್ತಿರುವುದು ಶ್ಲಾಘನೀಯ. ತಾಲ್ಲೂಕಿಗೆ ಹೆಮ್ಮೆಯಾದ ಈ ಮಕ್ಕಳಿಗೆ ಮುಂದಿನ ಮಾರ್ಗಸೂಚಿಗಳನ್ನು ತಿಳಿಸಿಕೊಡುವ ಕಾರ್ಯಕ್ರಮವಾಗಿ ಇದು ಪರಿವರ್ತನೆಗೊಳ್ಳಬೇಕು ಎಂದು ಶಾಸಕ ವಿ.ಮುನಿಯಪ್ಪ ತಿಳಿಸಿದರು.
ತಾಲ್ಲೂಕಿನ ಕದಿರಿನಾಯಕನಹಳ್ಳಿ(ವೈ.ಹುಣಸೇನಹಳ್ಳಿ ಸ್ಟೇಷನ್)ನ ಎಸ್‌.ಆರ್‌.ಇ.ಟಿ ಶಾಲೆಯಲ್ಲಿ ತಾಲ್ಲೂಕು ಕ.ಸಾ.ಪ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 125 ಅಂಕಗಳಿಗೆ 125 ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳ ಪ್ರತಿಭೆಯನ್ನು ಹೊರಹೊಮ್ಮಿಸುವ ಪ್ರೋತ್ಸಾಹದಾಯಕ ಕಾರ್ಯಕ್ರಮಗಳನ್ನು ಕಸಾಪದಿಂದ ತಾಲ್ಲೂಕಿನೆಲ್ಲೆಡೆ ಹಮ್ಮಿಕೊಳ್ಳುವಂತಾಗಲಿ. ಪ್ರತಿಭಾವಂತ ಮಕ್ಕಳು ಮುಂದೆ ಸಮಾಜಕ್ಕೆ ಕೊಡುಗೆ ಕೊಡುವಂತಹ ಸಾಧಕರಾಗುತ್ತಾರೆ ಎಂದು ಹೇಳಿದರು.
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಶ್ರೀನಿವಾಸ್‌ ಮಾತನಾಡಿ, ಇಡೀ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು 374 ವಿದ್ಯಾರ್ಥಿಗಳು ಈ ಬಾರಿ ಕನ್ನಡ ಭಾಷೆಯಲ್ಲಿ ಶೇಕಡಾ ನೂರರಷ್ಟು ಅಂಕಗಳನ್ನು ಪಡೆದಿದ್ದಾರೆ. ಇದು ನಿಜಕ್ಕೂ ಹೆಮ್ಮೆ ಪಡುವ ಸಂಗತಿ. ಈ ಮಕ್ಕಳಿಗೆ ಪಾಠ ಹೇಳಿಕೊಟ್ಟ ಶಿಕ್ಷರನ್ನೂ ಅಭಿನಂದಿಸಬೇಕು. ಕಸಾಪ ಜಿಲ್ಲಾ ಘಟಕದಿಂದ ಈ ಎಲ್ಲಾ ವಿದ್ಯಾರ್ಥಿಗಳನ್ನೂ ಪುರಸ್ಕರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಕನ್ನಡದಲ್ಲಿ 125 ಅಂಕಗಳನ್ನು ಪಡೆಯುವುದು ಸುಲಭವಲ್ಲ. ಈ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತಂದ ಮಕ್ಕಳು, ಅವರ ಶಿಕ್ಷಕರು ಹಾಗೂ ಪೋಷಕರು ಅಭಿನಂದನಾರ್ಹರು ಎಂದರು.
ಈ ಸಂದರ್ಭದಲ್ಲಿ ಎಸ್‌.ಆರ್‌.ಇ.ಟಿ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ನೃತ್ಯವನ್ನು ಪ್ರದರ್ಶಿಸಿದರು. ಕಸಾಪ ವತಿಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 125 ಅಂಕಗಳಿಗೆ 125 ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ, ಪುಸ್ತಕ ಮತ್ತು ನೆನಪಿನ ಕಾಣಿಕೆ ನೀಡಲಾಯಿತು.
ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸುಬ್ರಮಣಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಪಂಕಜಾ ನಿರಂಜನ್‌, ಎಸ್‌.ಆರ್‌.ಇ.ಟಿ ಶಾಲೆಯ ರಾಮಚಂದ್ರರೆಡ್ಡಿ, ಶಂಕರ್‌, ನಾಗರಾಜರಾವ್‌, ಸುಂದರಾಚಾರಿ, ನರಸಿಂಹಪ್ಪ, ವೆಂಕಟೇಶಪ್ಪ ಹಾಜರಿದ್ದರು.

error: Content is protected !!