ವಿದ್ಯೆ ಸಂಪಾದನೆಗೆ ಹೆಚ್ಚಿನ ಆದ್ಯತೆ ನೀಡಿ. ಪ್ರತಿಭೆಯೆಂಬುದು ವಜ್ರದಂತೆ, ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಅದು ಸ್ವಯಂ ಗೋಚರ. ವಜ್ರವನ್ನು ಹೆಕ್ಕುವ ಕೆಲಸ ಬಹಳ ಮುಖ್ಯ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಡಾ.ಎಸ್.ಸುಬ್ರಮಣ್ಯ ತಿಳಿಸಿದರು.
ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಭಾನುವಾರ ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ವತಿಯಿಂದ ದಿ.ವಿ.ಸೀತಾಲಕ್ಷ್ಮಿ ವೇದಿಕೆಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿಪ್ರ ಸಮಾಜ ವಿದ್ಯೆಯನ್ನು ನೆಚ್ಚಿಕೊಂಡವರು. ವಿದ್ಯಾಬುದ್ಧಿಯೊಂದಿಗೆ ವಿನಯಕ್ಕೆ ಪ್ರಾಶಸ್ತ್ಯ ನೀಡಿದ್ದಾರೆ. ಯಾರೂ ಕಸಿಯಲಾಗದ ಈ ವಿದ್ಯೆಯೆಂಬ ಆಸ್ತಿ ಮೈಗೂಡಿಸಿಕೊಂಡಿದ್ದರಿಂದ ಸಾಧಕರನ್ನು ಕಾಣಬಹುದಾಗಿದೆ ಎಂದು ಹೇಳಿದರು.
ಶಾಸಕ ವಿ.ಮುನಿಯಪ್ಪ ಮಾತನಾಡಿ, ಎಲ್ಲಾ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಿ ಅವರಿಗೆ ಪ್ರೋತ್ಸಾಹದಾಯಕವಾಗಿ ನಗದು ಸಹ ನೀಡುವ ಮೂಲಕ ವಿಪ್ರ ಜನಾಂಗದವರು ಸಮಾಜದಲ್ಲಿ ಮಾದರಿಯಾಗಿದ್ದಾರೆ. ತಾಲ್ಲೂಕಿನ ಸಾಧಕರನ್ನು ಗುರುತಿಸಿ ಗೌರವಿಸುವ ಉತ್ತಮ ಸಂಪ್ರದಾಯವನ್ನು ಪಾಲಿಸಿಕೊಂಡು ಸಹ ಬರುತ್ತಿದ್ದಾರೆ. ಈ ಕಾರ್ಯ ಅಭಿನಂದನೀಯ ಎಂದು ಹೇಳಿದರು.
ಬೆಳಿಗ್ಗೆ ಲೋಕಕಲ್ಯಾಣಾರ್ಥವಾಗಿ ‘ಶ್ರೀ ಮಹಾಗಣಪತಿ ಸಹಸ್ರನಾಮ (ಗರಿಕೆ) ಪೂಜಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನಲವತ್ತಮೂರು ಮಂದಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಮತ್ತು ಪದವಿಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳಿಗೆ ಪುರಸ್ಕರಿಸಲಾಯಿತು. ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಜನಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮೇಜರ್ ಎನ್.ಕೆ.ಅನಂತಪದ್ಮನಾಭರಾವ್, ಡಾ.ಬಿ.ಎನ್.ಮುರಳೀಧರ್, ಎನ್.ಕೆ.ಗುರುರಾಜರಾವ್, ವೇ.ಬ್ರ.ಶ್ರೀ ವೈ.ಎ.ಅರುಣ್‌ಕುಮಾರ್ ಶರ್ಮ ಮತ್ತು ಪಂಕಜ ನಿರಂಜನ್ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿ.ಮಂಜುನಾಥ್, ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಡಾ.ಡಿ.ಟಿ.ಸತ್ಯನಾರಾಯಣರಾವ್, ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಬ್ರಾಹ್ಮಣ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಅಟ್ಟೂರು ವೆಂಕಟೇಶ್, ಎಂ.ವಾಸುದೇವರಾವ್, ಎ.ಎಸ್.ರವಿ, ರಾಜ್ಯ ಕೌಶಲ ಅಭಿವೃದ್ಧಿ ಬೋರ್ಡ್‌ನ ಮಾಜಿ ಅಧ್ಯಕ್ಷೆ ಪುಷ್ಪಾ ಲಕ್ಷ್ಮೀನಾರಾಯಣಸ್ವಾಮಿ, ಕುಲಕರ್ಣಿ, ವಿ.ಕೃಷ್ಣ, ಎನ್.ಶ್ರೀಕಾಂತ್, ಎಸ್.ಸತೀಶ್, ಎಚ್.ವಿ.ನಾಗೇಂದ್ರ ಹಾಜರಿದ್ದರು.