Home News ಪ್ರತಿಯೊಂದು ಕುಟುಂಬವೂ ಶೌಚಾಲಯ ನಿರ್ಮಿಸಿಕೊಳ್ಳಬೇಕು – ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ

ಪ್ರತಿಯೊಂದು ಕುಟುಂಬವೂ ಶೌಚಾಲಯ ನಿರ್ಮಿಸಿಕೊಳ್ಳಬೇಕು – ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ

0

ಪ್ರತಿಯೊಂದು ಕುಟುಂಬವೂ ಶೌಚಾಲಯ ನಿರ್ಮಿಸಿಕೊಂಡಾಗ ಗ್ರಾಮದಲ್ಲಿ ನೈರ್ಮಲ್ಯ ಕಾಪಾಡುವುದು ಸೇರಿದಂತೆ ಎಲ್ಲರ ಆರೋಗ್ಯವೂ ಸುಧಾರಿಸುತ್ತದೆ ಎಂದು ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ ಹೇಳಿದರು.
ತಾಲ್ಲೂಕಿನ ಎಸ್.ದೇವಗಾನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವರದಗಾನಹಳ್ಳಿ ಗ್ರಾಮದಲ್ಲಿ ಬುಧವಾರ ನಿರ್ಮಲ ಭಾರತ್ ಅಭಿಯಾನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ನರೇಗಾ ಸೇರಿದಂತೆ ನಿರ್ಮಲ ಭಾರತ ಅಭಿಯಾನ ಯೋಜನೆಯಡಿಯಲ್ಲಿ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಾಣ ಮಾಡಿಕೊಳ್ಳಲು ಗ್ರಾಮ ಪಂಚಾಯತಿಯ ಮುಖಾಂತರ ಸಹಾಯಧನವನ್ನು ಬಿಡುಗಡೆ ಮಾಡಲಾಗುತ್ತಿದೆ. ಗ್ರಾಮಸ್ಥರು ಹಣದ ಬಿಡುಗಡೆ ವಿಷಯದಲ್ಲಿ ಗೊಂದಲ ಪಡುವುದು ಬೇಡ. ಗ್ರಾಮದಲ್ಲಿರುವ ಎಲ್ಲಾ ಕುಟುಂಬದವರೂ ಕಡ್ಡಾಯವಾಗಿ ಶೌಚಾಲಯಗಳನ್ನು ನಿರ್ಮಿಸಿ ಗ್ರಾಮದ ನೈರ್ಮಲ್ಯ ಕಾಪಾಡಬೇಕು. ಶೌಚಾಲಯ ನಿರ್ಮಿಸಿಕೊಂಡ ಎಲ್ಲಾ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಹಣ ಸಂದಾಯ ಮಾಡಲಾಗುತ್ತದೆ ಎಂದರು.
ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷ ಡಿ.ಎಸ್.ಎನ್.ರಾಜು ಮಾತನಾಡಿ ಪಂಚಾಯತಿ ವ್ಯಾಪ್ತಿಯ ಪ್ರತಿಯೊಂದು ಹಳ್ಳಿಯಲ್ಲೂ ವೈಯಕ್ತಿಕ ಶೌಚಾಲಯಗಳ ನಿರ್ಮಾಣ ಮಾಡಿಕೊಳ್ಳಲು ಗ್ರಾಮ ಪಂಚಾಯತಿ ಸದಸ್ಯರೂ ಸೇರಿದಂತೆ ಅಧಿಕಾರಿಗಳು ಅರಿವು ಮೂಡಿಸುವಲ್ಲಿ ಸಹಕಾರ ನೀಡಬೇಕೆಂದರು.
ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಗಣಪತಿಸಾಕರೆ ಮಾತನಾಡಿ ಸರ್ಕಾರದಿಂದ ಸಹಾಯಧನ ಬಿಡುಗಡೆಯಾಗಿದ್ದು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಅಧಿಕಾರಿಗಳು ನಿಮ್ಮ ಗ್ರಾಮಗಳಿಗೆ ಭೇಟಿ ನೀಡಿ ಶೌಚಾಲಯಗಳ ನಿರ್ಮಾಣ ಕಾರ್ಯದ ಬಗ್ಗೆ ಪರಿಶೀಲನೆ ನಡೆಸುವುದರೊಂದಿಗೆ ಶೌಚಾಲಯಗಳು ಸಂಪೂರ್ಣವಾಗಿ ಮುಗಿದಿದ್ದರೆ ನಿಮ್ಮ ಹಣವನ್ನು ನೀಡಲು ಯಾವುದೇ ಕಾರಣಕ್ಕೂ ವಿಳಂಬ ಮಾಡುವುದಿಲ್ಲ. ಸ್ಯಾನಿಟರಿ ಗುಂಡಿಗಳನ್ನು ಅಗೆಯಲು ಸಾಧ್ಯವಾಗದ ಬೆಟ್ಟ ಗುಡ್ಡಗಳ ಪ್ರದೇಶದಲ್ಲಿ ನಗರಗಳಲ್ಲಿ ನಿರ್ಮಾಣ ಮಾಡಿದಂತೆ ಯುಜಿಡಿ ವ್ಯವಸ್ಥೆಯ ರೀತಿ ಪೈಪ್‌ಗಳನ್ನು ಅಳವಡಿಸಲು ಮೇಲಾಧಿಕಾರಿಗಳ ಬಳಿ ಚರ್ಚೆ ನಡೆಸಲಾಗುತ್ತದೆ. ಮುಂಬರುವ ದಿನಗಳಲ್ಲಿ ಸರ್ಕಾರದ ಯಾವುದೇ ಸೌಲಭ್ಯವನ್ನು ಪಡೆಯಬೇಕಾದರೂ ಶೌಚಾಲಯ ಖಡ್ಡಾಯವಾಗಿದ್ದು ಎಲ್ಲರೂ ಕಡ್ಡಾಯವಾಗಿ ನಿರ್ಮಾಣ ಮಾಡಿಕೊಳ್ಳಬೇಕು. ಕಾರ್ಯಕ್ರಮದಲ್ಲಿ ಬಯಲು ಮಲವಿಸರ್ಜನೆಯಿಂದ ಅನೇಕ ರೋಗಗಳು ಹರಡುತ್ತಿರುವ ಬಗ್ಗೆ ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಡುವುದರೊಂದಿಗೆ ಹೆಣ್ಣು ಮಕ್ಕಳ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯಗಳನ್ನು ತಡೆಗಟ್ಟಲೂ ಸಾಧ್ಯವಾಗುತ್ತದೆ ಎಂದರು.
ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷ ಡಿ.ಎಸ್.ಎನ್.ರಾಜು, ಕಾರ್ಯನಿರ್ವಾಹಕ ಅಧಿಕಾರಿ ಗಣಪತಿಸಾಕರೆ, ತಾಲ್ಲೂಕು ಪಂಚಾಯತಿ ಸದಸ್ಯರಾದ ನಾರಾಯಣಸ್ವಾಮಿ, ವೇಣುಗೋಪಾಲ್, ಎಸ್.ದೇವಗಾನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಗಂಗಾಧರಪ್ಪ, ಅಶ್ವಥ್ಥರೆಡ್ಡಿ ಮತ್ತಿತರರು ಹಾಜರಿದ್ದರು.