ಕ್ವಿಟ್ ಇಂಡಿಯಾ ಚಳುವಳಿಯ ೭೫ ನೇ ವರ್ಷದ ಆಚರಣೆಯನ್ನು ತಾಲ್ಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ದ್ವೇಷ ಹಾಗೂ ಅಸೂಯೆಯನ್ನು ಪ್ರದರ್ಶಿಸಿದ್ದನ್ನು ಬಿಜೆಪಿ ತಾಲ್ಲೂಕು ಮಂಡಲ ಅತ್ಯುಗ್ರವಾಗಿ ಖಂಡಿಸುತ್ತದೆ ಎಂದು ತಾಲ್ಲೂಕು ಬಿಜೆಪಿ ಮಂಡಲ ಅಧ್ಯಕ್ಷ ಬಿ.ಸಿ.ನಂದೀಶ್ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ವಿಟ್ ಇಂಡಿಯಾ ಚಳುವಳಿಯ ಸಂಭ್ರಮಾಚರಣೆ ಮಾಡುವ ನೆಪದಲ್ಲಿ ಮಾಜಿ ಸಚಿವ ವಿ.ಮುನಿಯಪ್ಪ ಅವರ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಮತ್ತು ಪ್ರಧಾನಿ ನರೇಂದ್ರಮೋದಿ ಅವರ ಪ್ರತಿಕೃತಿಗಳನ್ನು ದಹಿಸುವ ಮೂಲಕ ದ್ವೇಷದ ರಾಜಕಾರಣ ಪ್ರದರ್ಶಿಸಿರುವುದು ಕಾಂಗ್ರೆಸ್ ಪಕ್ಷದ ಹತಾಶೆಯನ್ನು ತೋರಿಸಿದೆ. ಮೆರವಣಿಗೆಯಲ್ಲಿ ಅವಾಚ್ಯ ಶಬ್ಧಗಳಿಂದ ಪ್ರಧಾನಿ ನರೇಂದ್ರಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನು ನಿಂದಿಸಿ ಚಪ್ಪಲಿನ್ನು ಅವರ ಚಿತ್ರಕ್ಕೆ ಕಟ್ಟಿದ್ದು ದುರಂತದ ಸಂಗತಿ.
ಕೇಂದ್ರ ಸರ್ಕಾರದ ಜನಪರವಾದ ಕಾರ್ಯಕ್ರಮಗಳಿಂದಾಗಿ ರಾಷ್ಟ್ರದಲ್ಲಿ ತೀವ್ರ ಹಿನ್ನಡೆ ಅನುಭವಿಸುತ್ತಿರುವ ಕಾಂಗ್ರೆಸ್ ಪಕ್ಷ, ಹತಾಶೆಯಿಂದ ಇಂತಹ ಕೃತ್ಯಗಳಿಗೆ ಕೈಹಾಕಿದೆ. ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲು ಸಾಧ್ಯವಾಗದಿರುವಷ್ಟರ ಮಟ್ಟಿಗೆ ಕಾಂಗ್ರೆಸ್ ಪಕ್ಷ ಅಳಿವಿನಂಚಿಗೆ ಹೋಗುತ್ತಿದೆ.
ಸ್ವಾತಂತ್ರ್ಯ ಪೂರ್ವದ ಕಾಂಗ್ರೆಸ್ ರಾಜಕೀಯ ಪಕ್ಷವಾಗಿರಲಿಲ್ಲ. ದೇಶಭಕ್ತರ ಸ್ವಾತಂತ್ರ್ಯ ಹೋರಾಟಗಾರರ ಸಂಘಟನೆಯಾಗಿತ್ತು. ಆ ಹೆಸರನ್ನು ಬಳಸಿಕೊಂಡು ಕೆಲವರು ರಾಜಕೀಯ ಪಕ್ಷ ಮಾಡಿಕೊಂಡು ಸತತವಾಗಿ ಜನರಿಗೆ ಮಂಕುಬೂದಿ ಎರಚಿ ಆಳಿದರು. ಆದರೆ ಈಗ ಆ ಪಕ್ಷವು ತನ್ನ ಅಸ್ಥಿತ್ವ ಕಳೆದುಕೊಳ್ಳುತ್ತಿದೆ. ಕ್ವಿಟ್ ಇಂಡಿಯಾ ಚಳುವಳಿ ಆಚರಣೆಯನ್ನು ಎಲ್ಲಾ ದೇಶ ಭಕ್ತರೂ ಆಚರಿಸಬೇಕು. ಅದನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು. ಕನಿಷ್ಠ ಆ ಸಂಭ್ರಮಾಚರಣೆಯನ್ನೂ ಸಮರ್ಪಕವಾಗಿ ಆಚರಿಸದೆ ಸ್ಥಳೀಯ ಕಾಂಗ್ರೆಸ್ ಪಕ್ಷದವರು ದ್ವೇಷ ಅಸೂಯೆ ಪ್ರದರ್ಶಿಸಿದ್ದು ವಿಪರ್ಯಾಸವಾಗಿದೆ ಎಂದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜನಧನ ಯೋಜನೆ, ಉಜ್ವಲ ಯೋಜನೆ, ಜಿ.ಎಸ್.ಟಿ, ಮುದ್ರಾ ಯೋಜನೆ, ಫಸಲ್ ಭೀಮಾಯೋಜನೆ, ಆರೋಗ್ಯ ಕವಚ ಯೋಜನೆ, ಸ್ವಚ್ಚ ಭಾರತ ಯೋಜನೆ, ಮೇಕ್ ಇನ್ ಇಂಡಿಯಾ ಸೇರಿದಂತೆ ಅನೇಕ ಯೋಜನೆಗಳ ಬಗ್ಗೆ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆಗೆ ಒಳಗಾಗುತ್ತಿದ್ದಾರೆ. ಕಾಂಗ್ರೆಸ್ನವರು ಈ ರೀತಿಯಾಗಿ ಅಪಪ್ರಚಾರ ಮಾಡುವುದು ಹಾಸ್ಯಸ್ಪದವಾಗಿದೆ. ಸ್ಥಳೀಯ ಶಾಸಕರು, ತಮ್ಮ ಪಕ್ಷದಲ್ಲಿನ ಆಂತರಿಕ ಭಿನ್ನಮತ ಸರಿಪಡಿಸಿಕೊಳ್ಳಲು ಹೆಣಗಾಡುತ್ತಿದ್ದು, ಅಭಿವೃದ್ಧಿಯನ್ನು ಮರೆತಿದ್ದಾರೆ ಎಂದರು.
ನಗರಸಭಾ ಸದಸ್ಯ ರಾಘವೇಂದ್ರ ಮಾತನಾಡಿ, ಮಾಜಿ ಶಾಸಕರು, ಕ್ಷೇತ್ರದ ಬಗ್ಗೆ ಕಾಳಜಿವಹಿಸುವುದರ ಬದಲಿಗೆ ಕೇವಲ ಚುನಾವಣೆಯಲ್ಲಿ ಗೆಲ್ಲುವುದನ್ನೆ ಅಜೆಂಡಾ ಮಾಡಿಕೊಂಡಿದ್ದಾರೆ. ಇವರು ಬಿಜೆಪಿ ನಾಯಕರುಗಳ ಬಗ್ಗೆ ಅಪಪ್ರಚಾರ ಮಾಡುವ ಮೆರವಣಿಗೆಗೆ ನೇತೃತ್ವ ವಹಿಸಿದ್ದು ಸರಿಯಲ್ಲ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಆರ್.ಸುರೇಂದ್ರಗೌಡ, ಶ್ರೀರಾಮರೆಡ್ಡಿ, ತಾಲ್ಲೂಕು ಪ್ರಧಾನಕಾರ್ಯದರ್ಶಿ ಬಾಸ್ಕರ್ರೆಡ್ಡಿ, ರಾಜ್ಯ ಸಮಿತಿ ಸದಸ್ಯ ದಾಮೋದರ್, ಜಿಲ್ಲಾ ಕಾರ್ಯದರ್ಶಿ ಸುಜಾತಮ್ಮ, ರಾಮಕೃಷ್ಣಪ್ಪ, ಎಸ್.ಸಿ.ಮೋರ್ಚಾ ಅಧ್ಯಕ್ಷ ಮುನಿರಾಜು, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಹಾಜರಿದ್ದರು.
ಸಚಿವ ಡಿ.ಕೆ.ಶಿವಕುಮಾರ್, ರಮೇಶ್ ಜಾರಕಿಹೋಳಿ, ಲಕ್ಷ್ಮೀಹೆಬ್ಬಾಳ್ಕರ್ ಅವರ ಮನೆಗಳ ಮೇಲೆ ಆದಾಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಸಚಿವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಬಿಜೆಪಿ ಮುಖಂಡರು ಒತ್ತಾಯಿಸಿದರು.