Home News ಪ್ಲಾಸ್ಟಿಕ್ ಮುಕ್ತ ಸಂದೇಶ ಬೀರುವ ಬೀದಿನಾಟಕ

ಪ್ಲಾಸ್ಟಿಕ್ ಮುಕ್ತ ಸಂದೇಶ ಬೀರುವ ಬೀದಿನಾಟಕ

0

ನಗರದ ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ಬುಧವಾರ ನಗರಸಭೆಯವರು ಆಯೋಜಿಸಿದ್ದ ಪರಿವರ್ತನಾ ಕಲಾ ಸಂಸ್ಥೆಯ ಕಲಾವಿದರಿಂದ ಬೀದಿ ನಾಟಕದ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಗರಸಭೆ ಪೌರಾಯುಕ್ತ ಶ್ರೀಕಾಂತ್ ಮಾತನಾಡಿದರು.
ಪ್ಲಾಸ್ಟಿಕ್ ಮುಕ್ತ ಹಾಗೂ ಸ್ವಚ್ಛತೆಯಿಂದ ಕೂಡಿರುವ ನಗರ ನಮ್ಮದಾಗಬೇಕು. ಈ ಉದ್ದೇಶದಿಂದ ಜನರಲ್ಲಿ ಅರಿವನ್ನು ಮೂಡಿಸಲು ಕಲಾವಿದರ ಮೂಲಕ ಬೀದಿ ನಾಟಕವನ್ನು ಆಯೋಜಿಸಿರುವುದಾಗಿ ಅವರು ತಿಳಿಸಿದರು.
ಪ್ಲಾಸ್ಟಿಕ್ ತ್ಯಾಜ್ಯದಿಂದ ಆಗುವ ಅನಾಹುತಗಳನ್ನು ನಾವೆಲ್ಲರೂ ಅರಿಯಬೇಕು. ಈಗಾಗಲೇ ನಗರಸಭೆಯಿಂದ ವಿವಿಧ ರೀತಿಯಲ್ಲಿ ಅರಿವು ಮೂಡಿಸಲಾಗಿದ್ದರೂ ಇನ್ನೂ ಕೆಲವು ಅಂಗಡಿ ಮಾಲೀಕರು ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದಾರೆ. ಅದು ತಪ್ಪು. ಪ್ರತಿಯೊಬ್ಬರೂ ನಗರಸಭೆಯ ಉದ್ದೇಶಕ್ಕೆ ಕೈಜೋಡಿಸಿ. ಸ್ವಚ್ಛ ಭಾರತ ಅಭಿಯಾನದಡಿ ನಗರದ ಸರ್ವತೋಮುಖ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ಗಿಡ ನೆಡುವ ಕಾರ್ಯಕ್ರಮಕ್ಕೂ ಎಲ್ಲರೂ ಸಹಕರಿಸಬೇಕು ಎಂದರು.
ಪರಿವರ್ತನಾ ಕಲಾ ಸಂಸ್ಥೆಯ ಕಲಾವಿದರು ನಗರದ ತಾಲ್ಲೂಕು ಕಚೇರಿಯ ಮುಂದೆ, ಕೋಟೆ ವೃತ್ತದಲ್ಲಿ, ಬಸ್ ನಿಲ್ದಾಣ ಮತ್ತು ಮಯೂರ ವೃತ್ತದಲ್ಲಿ ಬೀದಿ ನಾಟಕದ ಮೂಲಕ ಪ್ಲಾಸ್ಟಿಕ್ ನಿಂದಾಗುವ ತೊಂದರೆಗಳ ಬಗ್ಗೆ ತಿಳುವಳಿಕೆ ಮೂಡಿಸಿದರು.
ಪರಿವರ್ತನಾ ಕಲಾಸಂಸ್ಥೆಯ ಅಧ್ಯಕ್ಷ ದೇವನಹಳ್ಳಿ ದೇವರಾಜ್, ಕಲಾವಿದರಾದ ಶ್ರೀನಿವಾಸ್, ಭರತ್, ವರುಣ್ ತೇಜಸ್, ಪ್ರಮೀಳಾ, ಸುಪ್ರಿಯಾ, ಸಹನಾ, ಪುನೀತ್ ಗಿರೀಶ್ ಹಾಜರಿದ್ದರು.

error: Content is protected !!