ಭೂ ಮಂಜೂರಾತಿಯಾಗಿ ಅರ್ಜಿಗಳನ್ನು ಸಲ್ಲಿಸಿರುವಂತಹ ರೈತ ಸಮುದಾಯಕ್ಕೆ ಬಗರ್ ಹುಕುಂ ಸಾಗುವಳಿ ಚೀಟಿಗಳನ್ನು ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಕರ್ನಾಟಕ ಭೂ ಹಕ್ಕುದಾರರ ವೇದಿಕೆಯ ಜಿಲ್ಲಾ ಸಂಚಾಲಕಿ ಚಿತ್ರಾವತಿ ಹೇಳಿದರು.
ನಗರದ ಸ್ತ್ರೀ ಶಕ್ತಿ ಭವನದಲ್ಲಿ ಮಂಗಳವಾರ ಭೂ ಹಕ್ಕುದಾರರ ವೇದಿಕೆಯಿಂದ ಆಯೋಜನೆ ಮಾಡಲಾಗಿದ್ದ ರೈತ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಬಂದು ೬೯ ವರ್ಷಗಳು ಕಳೆದರೂ ಕೂಡಾ ಭೂಮಿಗಾಗಿ ಹೋರಾಟ ಮಾಡುವಂತಹ ಪರಿಸ್ಥಿತಿಗಳು ಬದಲಾವಣೆಯಾಗಿಲ್ಲ, ಸಾವಿರಾರು ಮಂದಿ ರೈತರು ೫೩ ರ ನಮೂನೆಗಳಲ್ಲಿ ಅರ್ಜಿಗಳನ್ನು ಹಾಕಿಕೊಂಡಿದ್ದರೂ ಕೂಡಾ ಪರಿಶೀಲನೆ ನಡೆಸಿ ಭೂ ಮಂಜೂರಾತಿಯನ್ನು ನೀಡಬೇಕಾಗಿದ್ದ ಶಾಸಕರ ನೇತೃತ್ವದ ಸಮಿತಿಗಳು ವಿಫಲವಾಗಿವೆ, ಇದರಿಂದ ಸರ್ಕಾರಿ ಭೂಮಿಗಳನ್ನು ಕಬಳಿಕೆ ಮಾಡುವಂತಹವರಿಗೆ ಅನುಕೂಲ ಮಾಡಿಕೊಟ್ಟಂತಾಗಿದೆ. ಅನೇಕ ಹಳ್ಳಿಗಳಲ್ಲಿ ಪ್ರಭಾವಿಗಳು, ಬಡವರು ಸ್ವಾಧೀನಾನುಭವದಲ್ಲಿರುವ ಭೂಮಿಗಳನ್ನು ತಮ್ಮ ವಶಕ್ಕೆ ಪಡೆದುಕೊಳ್ಳಲು ಅವರ ಮೇಲೆ ದೌರ್ಜನ್ಯಗಳನ್ನು ನಡೆಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ ಇದರಿಂದ ಅನೇಕ ಕುಟುಂಬಗಳ ಬೀದಿಪಾಲಾಗುತ್ತಿವೆ. ಇಂತಹ ಪರಿಸ್ಥಿತಿಗಳನ್ನು ತಪ್ಪಿಸಬೇಕಾದರೆ, ಅರ್ಜಿಗಳನ್ನು ಸಲ್ಲಿಸಿರುವ ರೈತರೆಲ್ಲರೂ ಸಂಘಟಿತರಾಗಿ ಸರ್ಕಾರದ ಕಣ್ಣು ತೆರೆಸುವಂತಹ ಕೆಲಸವಾಗಬೇಕು, ಪ್ರತಿ ಹಳ್ಳಿಯಲ್ಲೂ ಸರ್ಕಾರಿ ಗೋಮಾಳ, ಗುಂಡುತೋಪುಗಳು, ಸಾರ್ವಜನಿಕ ಜಾಗಗಳನ್ನು ಪ್ರಭಾವಿಗಳಿಂದ ಉಳಿಸುವಂತಹ ಕೆಲಸವನ್ನು ಮಾಡಬೇಕಾಗಿದೆ. ಸರ್ಕಾರಿ ಭೂಮಿಗಳನ್ನು ಅಕ್ರಮವಾಗಿ ಕಬಳಿಕೆ ಮಾಡುವವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಒತ್ತಾಯ ಮಾಡಬೇಕು ಎಂದರು.
ಕರ್ನಾಟಕ ಭೂ ಹಕ್ಕುದಾರರ ವೇದಿಕೆಯ ತಾಲ್ಲೂಕು ಸಂಚಾಲಕಿ ಸೌಮ್ಯ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಬೆಳ್ಳೂಟಿ ಮಾರಪ್ಪ, ಸಂತೋಷ್, ಹಾಗೂ ವೇದಿಕೆಯ ಪದಾಧಿಕಾರಿಗಳು ಹಾಜರಿದ್ದರು.
- Advertisement -
- Advertisement -
- Advertisement -