Home News ಬಣ್ಣದ ಕುಂಡ ಮಾಡುವವರ ಬಣ್ಣರಹಿತ ಬದುಕು

ಬಣ್ಣದ ಕುಂಡ ಮಾಡುವವರ ಬಣ್ಣರಹಿತ ಬದುಕು

0

ಶ್ರಮ ಜೀವಿಗಳು ರಾಜ್ಯ, ಭಾಷೆ, ಪ್ರಾಂತ್ಯಗಳ ಗಡಿ ದಾಟಿ ಮುನ್ನಡೆಯುತ್ತಾರೆ. ಜೀವನವು ಕಷ್ಟಕರವಾದಾಗ ತಮ್ಮ ಶ್ರಮ ಜೀವನ ಮತ್ತು ಕೌಶಲ್ಯವನ್ನು ನಂಬಿ ಭಾಷೆ ಬರದಿದ್ದರೂ ವಲಸೆ ಹೋಗುತ್ತಾರೆ. ಈ ರೀತಿಯಲ್ಲಿ ತಮ್ಮ ಜೀವನ ನಡೆಸಲು, ಹೊಟ್ಟೆ ತುಂಬಿಸಿಕೊಳ್ಳಲು, ಕುಟುಂಬದ ನಿರ್ವಹಣೆಗಾಗಿ ಉತ್ತರಪ್ರದೇಶದಿಂದ ಒಂದು ಕುಟುಂಬ ನಗರಕ್ಕೆ ವಲಸೆ ಬಂದಿದೆ.

ಶಿಡ್ಲಘಟ್ಟದ ಬಸ್‌ನಿಲ್ದಾಣದ ಬಳಿಯ ಹಳೆಯ ಪೆಟ್ರೋಲ್‌ ಬಂಕ್‌ ಮುಂಭಾಗದ ಖಾಲಿ ಸ್ಥಳದಲ್ಲಿ ಬೀಡುಬಿಟ್ಟಿರುವ ಉತ್ತರಪ್ರದೇಶದ ವಲಸಿಗರು ಬಣ್ಣದ ಸಿಮೆಂಟ್‌ ಕುಂಡ ಮಾಡಿ ಮಾರಾಟಕ್ಕಿಟ್ಟಿದ್ದಾರೆ.

ವಿವಿಧ ಆಕಾರದ ಸಿಮೆಂಟಿನ ಕುಂಡ, ಸಿಮೆಂಟಿನ ತೊಟ್ಟಿಗಳನ್ನು ರೂಪಿಸುವುದರಲ್ಲಿ ಇವರು ಸಿದ್ಧಹಸ್ತರು. ನಗರದ ಬಸ್‌ನಿಲ್ದಾಣದ ಬಳಿಯ ಹಳೆಯ ಪೆಟ್ರೋಲ್‌ ಬಂಕ್‌ ಮುಂಭಾಗದ ಖಾಲಿ ಸ್ಥಳದಲ್ಲಿ ಬೀಡುಬಿಟ್ಟಿರುವ ಇವರು ಪುಟ್ಟ ಜೋಪಡಿಯನ್ನು ನಿರ್ಮಿಸಿಕೊಂಡಿದ್ದಾರೆ. ಸಿಮೆಂಟ್‌, ಮರಳು, ನೀರು ಕಲಸಿ ಕುಂಡದ ಆಕಾರದ ಪ್ಲಾಸ್ಟಿಕ್‌ ಎರಕದ ಅಚ್ಚಿಗೆ ಹಾಕಿ ಕುಂಡವನ್ನು ತಯಾರಿಸುತ್ತಾರೆ. ಅವಕ್ಕೆ ಬಣ್ಣ ಬಳಿದು ಅಂದವಾಗಿ ಕಾಣಿಸುವಂತೆ ಜೋಡಿಸಿದ್ದಾರೆ. ನೀರನ್ನು ತುಂಬಿಸಿಡಲು ಗೋಲಾಕಾರದ ಸಿಮೆಂಟ್‌ ತೊಟ್ಟಿಗಳನ್ನೂ ಇವರು ತಯಾರಿಸಿಟ್ಟಿದ್ದಾರೆ. ಒಂದು ತಿಂಗಳಿನಿಂದ ನಗರದಲ್ಲಿ ಬೀಡುಬಿಟ್ಟಿರುವ ಇವರು ಶ್ರಮಕ್ಕೆ ತಕ್ಕಂತಹ ಪ್ರತಿಫಲ ಸಿಗುತ್ತಿಲ್ಲವೆಂದು ನೋವನ್ನು ತೋಡಿಕೊಳ್ಳುತ್ತಾರೆ.
‘ನಮ್ಮೂರು ಉತ್ತರಪ್ರದೇಶದ ಉನಾವ್‌ಜಿಲ್ಲೆಯ ಸಬೀಪುರ್‌. ನಾವು ನಾಲ್ವರು ಸಹೋದರರು ಕುಟುಂಬ ನಿರ್ವಹಣೆ ಮತ್ತು ಹೊಟ್ಟೆ ಬಟ್ಟೆಗೆ ಸಂಪಾದಿಸಲೆಂದು ಕುಟುಂಬವನ್ನು ನಮ್ಮೂರಿನಲ್ಲಿ ಬಿಟ್ಟು ಇಲ್ಲಿಗೆ ಬಂದಿದ್ದೇವೆ. ನಾನಾ ಆಕಾರದ ಸಿಮೆಂಟ್‌ ಕುಂಡಗಳು ಮತ್ತು ನೀರಿನ ತೊಟ್ಟಿಗಳನ್ನು ತಯಾರಿಸಿಟ್ಟು ಗಿರಾಕಿಗಳಿಗೆ ಎದುರು ನೋಡುತ್ತಿದ್ದೇವೆ. ಒಂದು ತಿಂಗಳಾಯಿತು ಇಲ್ಲಿಗೆ ಬಂದು. ನಮ್ಮ ತಯಾರಿಕೆಯ ಕುಂಡಗಳನ್ನು ಎಲ್ಲರಿಗೂ ಕಾಣುವಂತೆ ಜೋಡಿಸಿಟ್ಟಿದ್ದೇವೆ. ವ್ಯಾಪಾರವಿಲ್ಲದೆ ಕಷ್ಟವಾಗಿದೆ. ಪ್ಲಾಸ್ಟಿಕ್‌ ಹೊದಿಕೆಯ ಜೋಪಡಿಯಲ್ಲಿ ಅಡುಗೆ ಮತ್ತು ವಾಸಕ್ಕೆ ವ್ಯವಸ್ಥೆ ಮಾಡಿಕೊಂಡು ಬದುಕುತ್ತಿದ್ದೇವೆ. ನಮ್ಮ ಶ್ರಮಕ್ಕೆ ತಕ್ಕ ಹಣ ಸಿಗುತ್ತಿಲ್ಲ’ ಎನ್ನುತ್ತಾರೆ ಉತ್ತರಪ್ರದೇಶದ ಆಲಂ.

error: Content is protected !!