ಚುನಾವಣೆ ಕಾರ್ಯಕ್ಕೆ ನೇಮಕ ಮಾಡುವಾಗ ಚುನಾವಣೆಯ ನೇಮಕಾತಿಯ ನೀತಿ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಚುನಾವಣೆಯ ಕಾರ್ಯವನ್ನು ಬಹಿಷ್ಕರಿಸಲು ನಿರ್ಧರಿಸಿದ್ದ ಸರ್ಕಾರಿ ನೌಕರರು ತಮ್ಮ ನಿರ್ಧಾರವನ್ನು ಬದಲಿಸಿದ್ದಾರೆ.
ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ತಹಸೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳನ್ನು ಕರೆಸಿ ಭಾನುವಾರ ಮಾತುಕತೆ ನಡೆಸಿ ಚುನಾವಣೆ ಕಾರ್ಯಕ್ಕೆ ನಿಯೋಜನೆಯಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸುವ ಭರವಸೆ ನೀಡಿದ ಮೇರೆಗೆ ಬಹಿಷ್ಕಾರದ ನಿರ್ಧಾರವನ್ನು ಹಿಂದಕ್ಕೆ ಪಡೆದುಕೊಂಡರು.
ಸುಮಾರು ೩೦ಕ್ಕೂ ಹೆಚ್ಚು ನೌಕರರ ನೇಮಕಾತಿಯ ಉಲ್ಲಂಘನೆಯನ್ನು ಸರಿಪಡಿಸಲು ಈ ಸಂದರ್ಭದಲ್ಲಿ ನಿರ್ಧರಿಸಲಾಯಿತು.
ಚುನಾವಣೆ ಕಾರ್ಯ ತುರ್ತು ಹಾಗೂ ಜರೂರು ಆಗಿರುವುದರಿಂದ ಎಲ್ಲವನ್ನೂ ಸರಿಪಡಿಸಲು ಸಾಧ್ಯವಿಲ್ಲ. ತೀವ್ರ ಅನಾರೋಗ್ಯದಿಂದ ಬಳಲುತ್ತಿರುವವರ, ಬೇರೆ ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ಚುನಾವಣೆ ಕಾರ್ಯದಿಂದ ಕೈ ಬಿಡಲಾಯಿತು.
ಹಾಗೆಯೆ ಹೆಚ್ಚು ವೇತನ ಪಡೆಯುವ ಅಧಿಕಾರಿಗಳನ್ನು ಕಡಿಮೆ ವೇತನ ಪಡೆಯುವ ಅಧಿಕಾರಿಗಳಿಗೂ ಕೆಳ ಹಂತದಲ್ಲಿ ಕಾರ್ಯನಿರ್ವಹಿಸಲು ನೀಡಿದ್ದ ಆದೇಶ ಪತ್ರವನ್ನು ರದ್ದುಗೊಳಿಸಿ ಸರಿಪಡಿಸಲು ಕ್ರಮ ತೆಗೆದುಕೊಳ್ಳಲಾಯಿತು. ನಂತರ ಸರ್ಕಾರಿ ನೌಕರರ ಪದಾಧಿಕಾರಿಗಳು ಚುನಾವಣೆಯ ಕಾರ್ಯಕ್ಕೆ ಬಹಿಷ್ಕಾರ ಹಾಕುವ ನಿರ್ಧಾರವನ್ನು ಕೈ ಬಿಟ್ಟಿರುವುದಾಗಿ ಘೋಷಿಸಿದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಕೆ.ಗುರುರಾಜ್, ಪ್ರಧಾನ ಕಾರ್ಯದರ್ಶಿ ಅಕ್ಕಲರೆಡ್ಡಿ, ಶಿಕ್ಷಕರ ಸಂಘದ ಅಧ್ಯಕ್ಷ ಬಿ.ವಿ.ಶ್ರೀರಾಮಯ್ಯ, ಗೌರವಾಧ್ಯಕ್ಷ ಸಿ.ಎಂ.ಮುನಿರಾಜು, ಉಪಾಧ್ಯಕ್ಷ ಎಂ.ಮಂಜುನಾಥ್, ಸಂಘಟನಾ ಕಾರ್ಯದರ್ಶಿ ಸುದರ್ಶನ್, ಚಂದ್ರಕಾಂತ್, ಗಜೇಂದ್ರ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -