Home News ಬಾವುಟಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳು, ನಗರದಲ್ಲಿ ಉದ್ರಿಕ್ತ ವಾತಾವರಣ

ಬಾವುಟಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳು, ನಗರದಲ್ಲಿ ಉದ್ರಿಕ್ತ ವಾತಾವರಣ

0

ನಗರದಲ್ಲಿ ಗುರುವಾರ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮುಸ್ಲೀಮರು ಕಟ್ಟಿದ್ದ ಬಾವುಟಕ್ಕೆ ರಾತ್ರಿ 12 ಗಂಟೆ ಸುಮಾರಿನಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದ ಪರಿಣಾಮ ಶುಕ್ರವಾರ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು.
ನಗರದ ಕೋಟೆ ವೃತ್ತದ ಬಳಿ ಗುರುವಾರ ರಾತ್ರಿ ಮಂಜುನಾಥ್ ಮತ್ತು ಧನಂಜಯ ಎಂಬುವವರು ಮದ್ಯ ಸೇವಿಸಿ ಹಬ್ಬದ ಪ್ರಯುಕ್ತ ಕಟ್ಟಿದ್ದ ಮುಸ್ಲೀಮರ ಬಾವುಟಕ್ಕೆ ಬೆಂಕಿ ಹಚ್ಚಿದ್ದರು. ಶುಕ್ರವಾರ ಬೆಳಿಗ್ಗೆ ನೂರಾರು ಸಂಖ್ಯೆಯಲ್ಲಿ ಮುಸ್ಲೀಮರು ನಗರದ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಪ್ರತಿಭಟಿಸಿದರು.
ಪ್ರತಿಭಟನಾಕಾರರು ನೀಡಿದ ದೂರಿನ ಅನ್ವಯ ಸರ್ಕಲ್ ಇನ್ಸ್ಪೆಕ್ಟರ್ ಶ್ರೀನಿವಾಸಮೂರ್ತಿ ಅವರು ಸೇರಿದ್ದ ಗುಂಪನ್ನುದ್ದೇಶಿಸಿ ದೂರು ನೀಡಿರುವ ಪ್ರಕಾರ ಆರೋಪಿಗಳನ್ನು ಬಂಧಿಸುವುದಾಗಿ ತಿಳಿಸಿದರೂ ಪಟ್ಟು ಬಿಡದೆ ಪೊಲೀಸ್ ಠಾಣೆಗೆ ಜನರು ಮುತ್ತಿಗೆ ಹಾಕಿದರು.
ಪೊಲೀಸ್ ಠಾಣೆಯ ಮುಂದೆ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು, ಘರ್ಷಣೆ ನಡೆದು ಬಿಗುವಿನ ವಾತಾವರಣ ನಿರ್ಮಾಣವಾಯಿತು. ಚಿಂತಾಮಣಿ ತಾಲ್ಲೂಕಿನ ಮುರುಗಮಲ್ಲಕ್ಕೆ ಬಂದೋಬಸ್ತ್ಗಾಗಿ ಪೊಲೀಸ್ ಸಿಬ್ಬಂದಿ ತೆರಳಿದ್ದರಿಂದಾಗಿ ಅತಿ ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಗುಂಪನ್ನು ಚದುರಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.
ಸ್ಥಳಕ್ಕೆ ಪ್ರಭಾರಿ ಪೊಲೀಸ್ ಎಸ್.ಪಿ ಕೋರವಾರ, ಡಿ.ವೈ.ಎಸ್.ಪಿ ಸಣ್ಣತಿಮ್ಮಯ್ಯ, ಸರ್ಕಲ್ ಇನ್ಸ್ಪೆಕ್ಟರ್ ಹನುಮಂತಪ್ಪ ಭೇಟಿ ನೀಡಿದ್ದರು. ಆರೋಪಿಗಳನ್ನು ಬಂಧಿಸಲು ತಂಡವನ್ನು ರಚಿಸಿದ್ದು, ನಗರದಲ್ಲಿ ಶಾಂತಿ ಕಾಪಾಡಲು ಚಿಂತಾಮಣಿ, ಚಿಕ್ಕಬಳ್ಳಾಪುರ, ಗೌರಿಬಿದನೂರು ಕಡೆಗಳಿಂದ ಪೊಲೀಸ್ ಸಿಬ್ಬಂದಿಯನ್ನು ಕರೆಸಿರುವುದಾಗಿ ಪೊಲೀಸ್ ಎಸ್.ಪಿ. ಕೋರವಾರ ತಿಳಿಸಿದರು.

error: Content is protected !!