Home News ಬಿಜೆಪಿ ಬಾಗಿಲು ತಟ್ಟಿ ಬಂದು ಈಗ ಮಾಜಿ ಸಚಿವರೊಂದಿಗೆ ಹೊಂದಾಣಿಕೆ ಮಾಡಿಕೊಂಡ ಹಾಲಿ ಶಾಸಕ –...

ಬಿಜೆಪಿ ಬಾಗಿಲು ತಟ್ಟಿ ಬಂದು ಈಗ ಮಾಜಿ ಸಚಿವರೊಂದಿಗೆ ಹೊಂದಾಣಿಕೆ ಮಾಡಿಕೊಂಡ ಹಾಲಿ ಶಾಸಕ – ಬಿ.ಎನ್‌.ರವಿಕುಮಾರ್‌

0

ಮಾಜಿ ಸಚಿವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹಾಲಿ ಶಾಸಕ ಎಂ.ರಾಜಣ್ಣ ಸ್ಪರ್ಧಿಸಿದ್ದಾರೆ ಎಂದು ಜೆಡಿಎಸ್‌ ಅಭ್ಯರ್ಥಿ ಮೇಲೂರು ಬಿ.ಎನ್‌.ರವಿಕುಮಾರ್‌ ಆರೋಪಿಸಿದರು.
ನಗರದ ಎಸ್.ಎಲ್.ವಿ. ಪ್ಲಾಜಾದಲ್ಲಿ ಮಂಗಳವಾರ ಆಯೋಜಿಸಿದ್ದ ಬಿಎಸ್‌ಪಿ ಮತ್ತು ಜೆಡಿಎಸ್‌ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಶಾಸಕ ಎಂ. ರಾಜಣ್ಣ ಕುಟುಂಬಕ್ಕಾಗಿ ಪಕ್ಷ ಹಾಳು ಮಾಡುತ್ತಿದ್ದಾರೆ. ದೇವೇಗೌಡರ ಬಗ್ಗೆ ಲಘುವಾಗಿ ಮಾತನಾಡುವ ನೈತಿಕತೆ ಇಲ್ಲ. ಮಾಜಿ ಶಾಸಕ ಎಸ್.ಮುನಿಶಾಮಪ್ಪ ಅವರ ಮಾತಿನ ಮೇಲೆ ೨೦೦೮ ರಲ್ಲಿ ಹಣವಿಲ್ಲದಿದ್ದರೂ ಪಕ್ಷದಿಂದ ದೇವೇಗೌಡರು ಟಿಕೆಟ್ ಕೊಟ್ಟಿದ್ದರು. ಗೆಲ್ಲಲು ಆಗದಿದ್ದಾಗ, ಪುನಃ ೨೦೧೩ ರ ಚುನಾವಣೆಯಲ್ಲಿಯೂ ಟಿಕೇಟ್‌ ನೀಡಿದ್ದರು. ಕಾರ್ಯಕರ್ತರು ೧೫ ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದರು. ಈಗ ಟಿಕೆಟ್ ಸಿಗಲಿಲ್ಲ ಎನ್ನುವ ಕಾರಣಕ್ಕೆ ಬಿಜೆಪಿ ಬಾಗಿಲು ತಟ್ಟಿ ಬಂದಿದ್ದಾರೆ. ಮಾಜಿ ಸಚಿವ ವಿ.ಮುನಿಯಪ್ಪ ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಅವರಿಗೆ ಕ್ಷೇತ್ರದ ಜನತೆ ಸೂಕ್ತ ಪಾಠ ಕಲಿಸಲಿದ್ದಾರೆ. ಜೆಡಿಎಸ್‌ ವರಿಷ್ಟರ ಬಗ್ಗೆ ಲಘುವಾಗಿ ಮಾತನಾಡಿರುವ ಅವರು ಕ್ಷಮೆಯಾಚಿಸಬೇಕು ಎಂದರು.
ಮುಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಆಗಲಿದ್ದಾರೆ, ಪ್ರಣಾಳಿಕೆಯಲ್ಲಿನ ಎಲ್ಲಾ ಅಂಶಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪಕ್ಷ ಕೆಲಸ ಮಾಡುತ್ತಿದೆ. ಕ್ಷೇತ್ರದ ಅಭಿವೃದ್ಧಿಯೇ ನಮ್ಮ ಧ್ಯೇಯವಾಗಿದೆ. ಮಹಿಳೆಯರು ಮತ್ತು ಯುವಕರಿಗೆ ಉದ್ಯೋಗ ಸೃಷ್ಟಿ, ದ್ರಾಕ್ಷಿ ಬೆಳೆಗಾರರಿಗೆ ಅನುಕೂಲವಾಗುವ ವೈನ್‌ ಯಾರ್ಡ್‌ ಸ್ಥಾಪನೆ, ರೇಷ್ಮೆಯ ವಿವಿಧ ಉತ್ಪನ್ನಗಳ ತಯಾರಿಕಾ ಕಾರ್ಖಾನೆ, ಹೈನೋದ್ಯಮ ಬಲವರ್ಧನೆ ಮಾಡುವ ಗುರಿಯನ್ನು ಹೊಂದಿದ್ದೇವೆ. ಕ್ಷೇತ್ರದ ಜನರ ನಂಬಿಕೆಯನ್ನು ಹುಸಿಗೊಳಿಸುವುದಿಲ್ಲ ಎಂದು ಜೆಡಿಎಸ್ ಅಭ್ಯರ್ಥಿ ಮೇಲೂರು ಬಿ.ಎನ್.ರವಿಕುಮಾರ್ ಹೇಳಿದರು.
೨೦೧೮ ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್, ಮತ್ತು ಬಿಎಸ್‌ಪಿ ಮೈತ್ರಿ ಮಾಡಿಕೊಂಡಿದ್ದು, ಶಿಡ್ಲಘಟ್ಟ ಕ್ಷೇತ್ರದಲ್ಲೂ ಜೆಡಿಎಸ್ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸಲಿದ್ದೇವೆ ಎಂದು ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ವಿ.ನಾಗಪ್ಪ ತಿಳಿಸಿದರು.
ರಾಜ್ಯದಲ್ಲಿ ೨೨೪ ಕ್ಷೇತ್ರಗಳ ಪೈಕಿ ಬಿಎಸ್‌ಪಿಗೆ ೨೦ ಸ್ಥಾನಗಳು, ಜೆಡಿಎಸ್‌ಗೆ ೨೦೪ ಸ್ಥಾನಗಳಲ್ಲಿ ಸ್ಪರ್ಧೆ ಮಾಡಲು ಪಕ್ಷದ ವರಿಷ್ಟರು ತೀರ್ಮಾನಿಸಿದ್ದಾರೆ. ಕುಮಾರಸ್ವಾಮಿ ಸಾರಾಯಿ ನಿಷೇಧ ಮಾಡಿದ್ದರಿಂದ ದಲಿತ ಕುಟುಂಬಗಳಿಗೆ ಅನುಕೂಲವಾಗಿದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು ಎನ್ನುವ ಉದ್ದೇಶದಿಂದ ಬಿಎಸ್‌ಪಿ ಪಕ್ಷ ಜೆಡಿಎಸ್ ಗೆಲುವಿಗೆ ಶ್ರಮಿಸಲಿದೆ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ, ಕ್ಷೇತ್ರದ ಜನರು ಬಿ.ಎನ್‌.ರವಿಕುಮಾರ್ ಪರವಾಗಿದ್ದಾರೆ. ಬಿಸ್‌ಪಿ, ಜೆಡಿಎಸ್‌ನೊಂದಿಗೆ ಕೈ ಜೋಡಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಶಾಸಕ ರಾಜಣ್ಣ ಬಿ ಫಾರಂ ಸಿಗಲಿಲ್ಲವೆಂದು ಪಕ್ಷೇತರರಾಗಿದ್ದಾರೆ. ಪಕ್ಷ ನಿಷ್ಠೆ ಇದ್ದಿದ್ದರೆ ಜೆಡಿಎಸ್ ಬಿಡುತ್ತಿರಲಿಲ್ಲ, ಯಾರಿಗೆ ಟಿಕೇಟ್‌ ಕೊಡಲಿ ಕೆಲಸ ಮಾಡುವುದಾಗಿ ಹೇಳಿದ್ದರು. ಈಗ ಕಾಂಗ್ರೆಸ್ ಪಕ್ಷದ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ನಿಷ್ಠಾವಂತ ಕಾರ್ಯಕರ್ತರು ನಮ್ಮೊಂದಿಗೆ ಇದ್ದಾರೆ. ತಂದೆಯ ಸಾವನ್ನು ರಾಜಕೀಯವಾಗಿ ಬಳಕೆ ಮಾಡಿಕೊಂಡು ರಾಷ್ಟ್ರೀಯ ಅಧ್ಯಕ್ಷರನ್ನು ದೂರುತ್ತಿದ್ದಾರೆ. ಇದು ಸರಿಯಲ್ಲ ಎಂದರು.
ಬಿಎಸ್‌ಪಿ ಮುಖಂಡರಾದ ಡಾ.ದೇವಪ್ಪ, ಎಸ್. ನರೇಶ್ ಬಾಬು, ನಗರ ಘಟಕದ ಅಧ್ಯಕ್ಷ ರಾಮು, ಎನ್.ನಾಗೇಶ್, ಮೂರ್ತಿ, ಗಂಜಿಗುಂಟೆ ನರಸಿಂಹಮೂರ್ತಿ, ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯರೇಖಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ನಗರಸಭಾ ಸದಸ್ಯ ನಂದು ಕಿಶನ್, ಹಾಜರಿದ್ದರು.

error: Content is protected !!