Home News ಬಿಜೆಪಿ ಸರ್ಕಾರದ್ದು ಜನವಿರೋಧಿ ಧೋರಣೆ

ಬಿಜೆಪಿ ಸರ್ಕಾರದ್ದು ಜನವಿರೋಧಿ ಧೋರಣೆ

0

ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ ಜನವಿರೋಧಿ ಧೋರಣೆಯಿಂದಾಗಿ ಜನರು ಬದುಕುವ ಹಕ್ಕನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ರಾಜೀವ್‌ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷೆ ಮೀನಾಕ್ಷಿ ನಟರಾಜ್ ಆರೋಪಿಸಿದರು.
ತಾಲ್ಲೂಕಿನ ಬೆಳ್ಳೂಟಿ ಗೇಟ್‌ನಲ್ಲಿರುವ ಕಲ್ಯಾಣಮಂಟಪದಲ್ಲಿ ಸೋಮವಾರ ಆಯೋಜನೆ ಮಾಡಲಾಗಿದ್ದ ’ಗ್ರಾಮ ಸ್ವರಾಜ್ ಜಾಗೃತಿ ಅಭಿಯಾನ’ ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಬಿಜೆಪಿ ಪಕ್ಷಕ್ಕೆ ದೇಶದಲ್ಲಿ ಎಲ್ಲಾ ಸಮುದಾಯಗಳ ಜನರ ಅಭಿವೃದ್ಧಿಗಿಂತ ಹೆಚ್ಚಾಗಿ ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಸರ್ವನಾಶ ಮಾಡುವ ಗುರಿಯನ್ನಿಟ್ಟುಕೊಂಡು ಜನರನ್ನು ಮರಳುಗೊಳಿಸುತ್ತಾ ತನಗೆ ಸಿಕ್ಕಿರುವ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಬಿಜೆಪಿಯ ಕನಸು ಎಂದಿಗೂ ಸಾಧ್ಯವಾಗುವುದಿಲ್ಲ. ದೇಶಕ್ಕಾಗಿ ಕಾಂಗ್ರೆಸ್ ಪಕ್ಷದ ನೇತೃತ್ವ ವಹಿಸಿಕೊಂಡಿದ್ದ ಇಂದಿರಾಗಾಂಧಿ, ರಾಜೀವ್ ಗಾಂಧಿ, ಅವರು ತಮ್ಮ ಪ್ರಾಣವನ್ನೆ ಮುಡುಪಾಗಿಟ್ಟದ್ದಾರೆ. ದೇಶದ ಪ್ರಧಾನಿಯಾಗುವ ಅವಕಾಶಗಳು ಒದಗಿ ಬಂದರೂ ಅಧಿಕಾರವನ್ನು ತಿರಸ್ಕಾರ ಮಾಡುವ ಮೂಲಕ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರು ದೇಶದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ.
ಇಂತಹ ಪಕ್ಷವನ್ನು ದೇಶದಲ್ಲಿ ನಿರ್ನಾಮ ಮಾಡಲು ಸಾಧ್ಯವಿಲ್ಲ. ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಅವರ ಕನಸಾಗಿದ್ದ ಗ್ರಾಮ ಸ್ವರಾಜ್ ಯೋಜನೆಯು ಸಮರ್ಪಕವಾಗಿ ಅನುಷ್ಠಾನವಾಗಬೇಕಾದರೆ ಗ್ರಾಮ ಮಟ್ಟದಿಂದಲೇ ಜನರಿಗೆ ಕಾಂಗ್ರೆಸ್ ಪಕ್ಷ ದೇಶಕ್ಕೆ ಕೊಟ್ಟಿರುವ ಕೊಡುಗೆಯೇನು ಎಂಬುದು ತಿಳಿಸಬೇಕು. ಗ್ರಾಮ ಸಭೆಗಳಲ್ಲಿ ಚರ್ಚೆಯಾಗುವಂತಹ ವಿಚಾರಗಳು ಅನುಷ್ಟಾನಗೊಳಿಸಬೇಕು. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಾಧ್ಯಮಗಳು ತಾರತಮ್ಯ ಮಾಡುತ್ತಿವೆ. ಆದ್ದರಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೇ ಮಾಧ್ಯಮಗಳ ಕೆಲಸವನ್ನು ಮಾಡಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ ಮಾತನಾಡಿ, ಗ್ರಾಮ ಮಟ್ಟದಲ್ಲಿ ಪಕ್ಷದ ಬೇರನ್ನು ಗಟ್ಟಿಗೊಳಿಸುವ ಕೆಲಸವನ್ನು ಮಾಡಲು ಕಾರ್ಯಕರ್ತರು ಮುಂದಾಗಬೇಕು. ನಮ್ಮ ಹಾದಿ ಆರೋಗ್ಯಕರವಾದುದು. ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಮೂಲ ಉದ್ದೇಶ ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳಲ್ಲಿ ನಾಯಕತ್ವ ಗುಣವನ್ನು ಬೆಳೆಸುವುದು. ಜನಪ್ರತಿನಿಧಿಗಳನ್ನು ಸಂಘಟಿಸಿ ಚುನಾಯಿತ ಪ್ರತಿನಿಧಿಗಳಲ್ಲಿ ಹೊಸ ಹುರುಪು, ಜಾಗೃತಿ ಮತ್ತು ರಾಷ್ಟ್ರಪ್ರಜ್ಞೆಯನ್ನು ಬಲಪಡಿಸಿ, ನಮ್ಮ ಪ್ರಜಾಪ್ರಭುತ್ವದ ತಳಹದಿಯಾದ ಗ್ರಾಮ ಸ್ವರಾಜ್ಯ, ಜನರ ಸಬಲೀಕರಣ, ಅಧಿಕಾರ ವಿಕೇಂದ್ರಿಕರಣಗಳತ್ತ ಹೆಚ್ಚು ಒತ್ತು ನೀಡಿ ತಳಮಟ್ಟದಿಂದ ಸಂಘಟಿಸುವುದಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಮುನಿರಾಜು ಮಾತನಾಡಿ, ಪಂಚಾಯಿತಿ ಜನಪ್ರತಿನಿಧಿಗಳು ಹಾಗೂ ಮುಖಂಡರು ಕೇವಲ ಸರ್ಕಾರದ ಅನುದಾನಗಳನ್ನು ತಲುಪಿಸಿದರೆ ಸಾಲದು. ಶೋಷಣೆ, ಅಸ್ಪೃಶ್ಯತೆ ಹೋಗಲಾಡಿಸಬೇಕು. ಶೌಚಾಲಯ, ಸ್ವಚ್ಚತೆಗೆ ಆದ್ಯತೆ ನೀಡಬೇಕು. ಪ್ರತಿಯೊಬ್ಬ ಜನಪ್ರತಿನಿಧಿಯ ಮನೆಯಲ್ಲೂ ಸಂವಿಧಾನದ ಬಗ್ಗೆ, ಗಾಂಧಿ, ಅಂಬೇಡ್ಕರ್, ನೆಹರು ಅವರ ಚಿಂತನೆಗಳ ಬಗ್ಗೆ ಪುಸ್ತಕಗಳು ಇರಬೇಕು. ತಾವು ಓದಿ ಅರ್ಥಮಾಡಿಕೊಂಡಾಗ ಇತರರ ಕಷ್ಟ ಸುಖಕ್ಕೆ ಸ್ಪಂದಿರಬಹುದು ಎಂದು ಹೇಳಿದರು.
ರಾಜೀವ್‌ ಗಾಂಧಿ ಪಂಚಾಯತ್‌ ರಾಜ್‌ ಸಂಘಟನೆಯ ಜಿಲ್ಲಾ ಸಂಚಾಲಕ ಎನ್‌.ಆರ್‌.ನಿರಂಜನ್‌, ತಾಲ್ಲೂಕು ಪಂಚಾಯಿತಿ ಸದಸ್ಯೆ ಪಂಕಜ ನಿರಂಜನ್, ಭಕ್ತರಹಳ್ಳಿ ಮುನೇಗೌಡ, ಎಚ್.ಎಂ.ಮುನಿಯಪ್ಪ, ಡಿ.ಬಿ.ವೆಂಕಟೇಶ್, ಆರ್.ಶ್ರೀನಿವಾಸ್, ವೆಂಕಟೇಶ್, ಎ.ರಾಮಚಂದ್ರಪ್ಪ, ವಿನೋಧ ಮುಂತಾದವರು ಹಾಜರಿದ್ದರು.