Home News ಬೆಂಗಳೂರಿಗೆ ಹೊರಟ ಪಡಿತರ ವಿತರಕರ ಸಂಘದ ಸದಸ್ಯರು ಹಾಗೂ ಜಾಗೃತಿ ಸಮಿತಿ ಸದಸ್ಯರು

ಬೆಂಗಳೂರಿಗೆ ಹೊರಟ ಪಡಿತರ ವಿತರಕರ ಸಂಘದ ಸದಸ್ಯರು ಹಾಗೂ ಜಾಗೃತಿ ಸಮಿತಿ ಸದಸ್ಯರು

0

ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಆಸರೆಯಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಮತ್ತು ಪಡಿತರ ವಿತರಕರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ಸರ್ಕಾರದ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಆಯೋಜಿಸಲಾಗಿರುವ ಉಚಿತ ಹೆಚ್ಚುವರಿ ಅಕ್ಕಿ ವಿತರಣೆ ಹಾಗು ಜಾಗೃತಿ ಸಮಿತಿ ಸದಸ್ಯರ ಕಾರ್ಯಾಗಾರ ಉದ್ಘಾಟನೆ ಸಮಾರಂಭಕ್ಕೆ ಗುರುವಾರ ನಗರದ ಪ್ರವಾಸಿ ಮಂದಿರದಿಂದ ಹೊರಟ ಪಡಿತರ ವಿತರಕರ ಸಂಘದ ಸದಸ್ಯರೂ ಮತ್ತು ಜಾಗೃತಿ ಸಮಿತಿ ಸದಸ್ಯರಿಗೆ ಶುಭ ಕೋರಿ ಅವರು ಮಾತನಾಡಿದರು.
ಈ ಹಿಂದೆ ರಾಜ್ಯಾದ್ಯಂತ ಪಡಿತರ ಚೀಟಿ ವಿತರಣೆಯಲ್ಲಿ ಸಾಕಷ್ಟು ಲೋಪ ದೋಷಗಳಾಗಿದ್ದು ಇದೀಗ ಸರ್ಕಾರದ ಮಹತ್ತರ ಯೋಜನೆಯಿಂದ ಅರ್ಹರಿಗೆ ಬಿಪಿಎಲ್ ಪಡಿತರ ಚೀಟಿ ಸಿಗುವಂತಾಗಿದೆ. ಪ್ರತಿ ಪಡಿತರ ಚೀಟಿಗೂ ಆಧಾರ್ ಚೀಟಿ ಲಿಂಕ್ ಮಾಡುವುದರಿಂದ ನಕಲಿ ಪಡಿತರ ಚೀಟಿಗಳು ಈಗಾಗಲೇ ರದ್ದಾಗಿದ್ದು ಇದೀಗ ನೂತನ ಪಡಿತರ ಚೀಟಿಗಾಗಿ ಅರ್ಜಿ ಹಾಕಲು ಸಹ ಇಲಾಖೆ ಅವಕಾಶ ಮಾಡಿಕೊಟ್ಟಿದ್ದು ಪಡಿತರ ಚೀಟಿಗಾಗಿ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು ಎಂದರು.
ಕಳೆದ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯೂನಿಟ್ ಒಂದಕ್ಕೆ ೫ ಕೆಜಿಯಿದ್ದ ಅಕ್ಕಿಯನ್ನು ಇದೀಗ ೭ ಕೆಜಿಗೆ ಏರಿಸಿದ್ದು ಅದರ ಉದ್ಘಾಟನೆ ಸಮಾರಂಭಕ್ಕಾಗಿ ತಾಲ್ಲೂಕಿನಿಂದ ಪಡಿತರ ವಿತರಕರೂ ಸೇರಿದಂತೆ ಜಾಗೃತಿ ಸಮಿತಿ ಸದಸ್ಯರು ಹೊರಟಿದ್ದು ಎಲ್ಲರಿಗೂ ಶುಭವಾಗಲಿ, ಸರ್ಕಾರದ ವಿವಿಧ ಯೋಜನೆಗಳನ್ನು ಜನ ಸಮಾನ್ಯರಿಗೆ ತಲುಪಿಸುವಲ್ಲಿ ಅಧಿಕಾರಗಳು ಮತ್ತಷ್ಟು ಕಾಳಜಿ ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಆಹಾರ ನಿರೀಕ್ಷಕ ಪ್ರಕಾಶ್, ಪಡಿತರ ಚೀಟಿ ವಿತರಕರ ಸಂಘದ ಅಧ್ಯಕ್ಷ ಐ.ನಾರಾಯಣಸ್ವಾಮಿ, ಉಪಾಧ್ಯಕ್ಷ ವೇಣು, ನಿರ್ದೇಶಕರಾದ ಮುನಿರಾಜು, ಆಂಜನೇಯರೆಡ್ಡಿ, ಬಾಲಾಜಿ, ವಿಜಯ್‌ಪ್ರಕಾಶ್ ಮತ್ತಿತರರು ಹಾಜರಿದ್ದರು.