Home News ಬೆಂಗಳೂರು ಹೊರತುಪಡಿಸಿ ಬೇರೆ ಯಾವ ನಗರದಲ್ಲೂ ನಿರೀಕ್ಷಿತ ಮಟ್ಟದಲ್ಲಿ ಸೌಕರ್ಯಗಳಿಲ್ಲ

ಬೆಂಗಳೂರು ಹೊರತುಪಡಿಸಿ ಬೇರೆ ಯಾವ ನಗರದಲ್ಲೂ ನಿರೀಕ್ಷಿತ ಮಟ್ಟದಲ್ಲಿ ಸೌಕರ್ಯಗಳಿಲ್ಲ

0

ಇನ್ಫೊಸಿಸ್ ಸಂಸ್ಥೆಯನ್ನು ಸ್ಥಾಪಿಸುವ ಮತ್ತು ಮಾಹಿತಿ ತಂತ್ರಜ್ಞಾನದ ವ್ಯಾಪ್ತಿಯನ್ನು ಎಲ್ಲೆಡೆ ವಿಸ್ತರಿಸುವ ಉದ್ದೇಶವಿದ್ದರೂ ಬೆಂಗಳೂರು ಹೊರತುಪಡಿಸಿ ಬೇರೆ ಯಾವ ನಗರದಲ್ಲೂ ನಿರೀಕ್ಷಿತ ಮಟ್ಟದಲ್ಲಿ ಸೌಕರ್ಯಗಳಿಲ್ಲ ಎಂದು ಇನ್ಫೊಸಿಸ್ ಸಂಸ್ಥೆ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಬೇಸರ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಭಾನುವಾರ ನಡೆದ ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಮೈಸೂರು ಮತ್ತು ಮಂಗಳೂರಿನಲ್ಲಿ ಇನ್ಫೊಸಿಸ್ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು ಹುಬ್ಬಳ್ಳಿಯಲ್ಲೂ ಕೂಡ ಆರಂಭವಾಗಲಿದೆ. ಆದರೆ ಬೆಂಗಳೂರು ಹೊರತುಪಡಿಸಿ ಅಲ್ಲಿ ಎಲ್ಲಿಯೂ ನಿರೀಕ್ಷಿತ ಮಟ್ಟದ ಸೌಕರ್ಯಗಳಿಲ್ಲ. ಸಂಸ್ಥೆಯ ಕಾರ್ಯನಿರ್ವಹಣೆ ಮತ್ತು ಉದ್ಯೋಗಿಗಳ ಇರುವಿಕೆಗೆ ಪೂರಕವಾದ ವಾತಾವರಣವಿಲ್ಲ ಎಂದರು.
ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ, ಪಂಚತಾರಾ ಹೋಟೆಲ್ ಮತ್ತು ಇನ್ನಿತರ ಅತ್ಯಾಧುನಿಕ ಸೌಕರ್ಯಗಳು ಇರದಿದ್ದರೆ ಇನ್ಫೊಸಿಸ್ನಂತಹ ಸಂಸ್ಥೆಯ ಕಾರ್ಯ ನಿರ್ವಹಣೆ ಕಷ್ಟವಾಗುತ್ತದೆ. ತಿರುವನಂತಪುರಂ, ಭುವನೇಶ್ವರದಲ್ಲೂ ಇಂತಹದ್ದೇ ಸಮಸ್ಯೆಗಳಿವೆ. ವಿದೇಶದಿಂದ ಬಂದು ಹೋಗುವ ಜನರಿಗೆ ಇಲ್ಲಿ ತಂಗಲು ಅಚ್ಚುಕಟ್ಟಾದ ವ್ಯವಸ್ಥೆಯಿರಬೇಕು ಮತ್ತು ಇತರೆ ಸೌಕರ್ಯಗಳು ದೊರೆಯುವಂತಿರಬೇಕು ಎಂದು ಅವರು ತಿಳಿಸಿದರು.