ತಾಲ್ಲೂಕಿನ ರೈತರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುವಲ್ಲಿ ಬೆಸ್ಕಾಂ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ಬೆಸ್ಕಾಂ ಇಲಾಖೆಯ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಟಿ.ಬಿ.ರಸ್ತೆಯುದ್ದಕ್ಕೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಮೆರವಣಿಗೆ ನಡೆಸಿದ ನಂತರ ಬೆಸ್ಕಾಂ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಬಾಗಿಲಲ್ಲೆ ತಡೆದ ಪೋಲಿಸರ ವಿರುದ್ಧವೂ ಘೋಷಣೆಗಳನ್ನು ಕೂಗಿದರು.
ಅನಿಯಮಿತ ಲೋಡ್ ಶೆಡ್ಡಿಂಗ್ ನಿಲ್ಲಿಸಬೇಕು. ರೈತರ ಪಂಪ್ ಸೆಟ್‌ಗಳನ್ನು ಸಕ್ರಮಗೊಳಿಸಬೇಕು, ನಿರಂತರವಾಗಿ ೮ ಗಂಟೆಗಳ ಕಾಲ 3 ಫೇಸ್ ವಿದ್ಯುತ್ ಪೂರೈಕೆ ಮಾಡಬೇಕು. ಸುಟ್ಟುಹೋದ ಟ್ರಾನ್ಸ್‌ಫಾರ್ಮರ್‌ಗಳನ್ನು ತಕ್ಷಣ ಬದಲಿಸಬೇಕು. ರೈತರ ಪಂಪ್‌ಸೆಟ್‌ಗಳಿಗೆ ಶೀಘ್ರ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಹಳೆಯ ತಂತಿಗಳನ್ನು ಮತ್ತು ಕಂಬಗಳನ್ನು ಬದಲಿಸಿ ವಿದ್ಯುತ್ ನಷ್ಟ ತಪ್ಪಿಸಿ ರೈತರ ಪಂಪ್‌ಸೆಟ್ ಉಳಿಸಬೇಕು. ಲೈನ್‌ಮನ್‌ಗಳ ಕೊರತೆ ನೀಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಇಂಧನ ಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡ ಮೇಲೆ ಲೋಕಸಭಾ ಚುನಾವಣೆಯಲ್ಲಿ ಮತಗಳಿಕೆಗಾಗಿ ವಿದ್ಯುತ್ ಲೋಡ್ ಶೆಡ್ಡಿಂಗ್ ಮಾಡುವುದಿಲ್ಲವೆಂದು ಆಶ್ವಾಸನೆ ನೀಡಿದ್ದರು, ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಆಡಳಿತ ನಡೆಸಿದಾಗ ರೈತರಿಗೆ ಸಮಸ್ಯೆಯಾಗದಂತೆ ನೋಡಿಕೊಂಡಿದ್ದರು, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದರು.
ಬೆಸ್ಕಾಂ ಇಲಾಖೆ ರೈತರ ಪಂಪ್ ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿ, ಎಇಇ ಅನ್ಸರ್‌ಪಾಷಾ, ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಮನವಿಯನ್ನು ಸ್ವೀಕರಿಸಿ ಮಾತನಾಡಿದ ಎಇಇ ಅನ್ಸರ್‌ಪಾಷಾ, ತಾಲ್ಲೂಕಿನಲ್ಲಿ ೦೮ ವಿದ್ಯುತ್ ಸ್ಟೇಷನ್‌ಗಳಿದ್ದು, ದಿನೇ ದಿನೇ ಕೊಳವೆಬಾವಿಗಳು ಕೊರೆಯುವಂತಹ ರೈತರ ಸಂಖ್ಯೆ ಹೆಚ್ಚಾಗುತ್ತಿದ್ದು, ರೈತರು ಕೊರೆದ ಕೊಳವೆಬಾವಿಗಳನ್ನು ೫೦ ರೂಪಾಯಿಗಳನ್ನು ನೀಡಿ ರಿಜಿಸ್ಟರ್ ಮಾಡಿಸಿಕೊಳ್ಳದೆ ಇರುವುದು ವಿದ್ಯುತ್ ಕೊರತೆ ಉಂಟಾಗಲು ಕಾರಣವಾಗಿದೆ. ರೈತರು ಇಲಾಖೆಯಲ್ಲಿ ನೊಂದಾವಣಿ ಮಾಡಿಕೊಂಡರೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲು ಅನುಕೂಲವಾಗುತ್ತದೆ. ಮನೆಗಳಿಗೆ ಮೀಟರುಗಳನ್ನು ಅಳವಡಿಸಿಕೊಳ್ಳದೆ, ನೇರವಾಗಿ ವಿದ್ಯುತ್ ತಂತಿಗಳಿಂದ ವಿದ್ಯುತ್ ಸಂಪರ್ಕ ಪಡೆದುಕೊಳ್ಳುತ್ತಿದ್ದು, ಕಡಿವಾಣ ಹಾಕಬೇಕಾಗಿದೆ ಎಂದರು.
ಬಿಜೆಪಿ ಮುಖಂಡರಾದ ಸುರೇಂದ್ರಗೌಡ, ಸಿ.ವಿ.ಲೋಕೇಶ್‌ಗೌಡ, ಶಿವಕುಮಾರಗೌಡ, ಕೆಂಪರೆಡ್ಡಿ, ರಾಘವೇಂದ್ರ, ದಾಮೋದರ್, ಬಾಲಮುರಳೀಕೃಷ್ಣ, ಕೆಂಪೇಗೌಡ, ರವಿಪ್ರಕಾಶ್ ಚನ್ನಕೇಶವರೆಡ್ಡಿ, ನಾರಾಯಣಸ್ವಾಮಿ, ನಾಗನರಸಿಂಹ, ರವಿಚಂದ್ರ, ನರೇಶ್, ಮಂಜುಳಮ್ಮ, ಸುಜಾತಮ್ಮ, ಶಿವಮ್ಮ, ಟಿ.ರತ್ನಮ್ಮ, ಅಶ್ವಥ್, ಮಧುಸೂದನ್, ರಾಮಚಂದ್ರಪ್ಪ, ಅಶ್ವಕ್ ಅಹ್ಮದ್ ಮುಂತಾದವರು ಹಾಜರಿದ್ದರು.