Home News ಬೆಸ್ಕಾಂ ಕಛೇರಿಗೆ ಮುತ್ತಿಗೆ

ಬೆಸ್ಕಾಂ ಕಛೇರಿಗೆ ಮುತ್ತಿಗೆ

0

ಸಮಾನ ಮನಸ್ಕರ ಹೋರಾಟ ಸಮಿತಿ ಹಾಗೂ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಸದಸ್ಯರು ಗುರುವಾರ ತಾಲ್ಲೂಕಿನಲ್ಲಿನ ವಿದ್ಯುತ್ ಸಮಸ್ಯೆಯನ್ನು ಸರಿಪಡಿಸುವಂತೆ ಒತ್ತಾಯಿಸಿ ಬೆಸ್ಕಾಂ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ತಾಲ್ಲೂಕಿನಾದ್ಯಂತ ವಿದ್ಯುತ್ ಸಮಸ್ಯೆ ತೀವ್ರತರವಾಗಿದೆ. ತಾಲ್ಲೂಕಿನಾದ್ಯಂತೆ ರೈತರು ಹೆಚ್ಚಾಗಿ ರೇಷ್ಮೆ ಹಾಗೂ ಹೈನುಗಾರಿಕೆಯನ್ನು ಅವಲಂಭಿಸಿದ್ದು, ಬೆಳೆಗಳಿಗೆ ನೀರು ಹಾಯಿಸದಂತಾಗಿದೆ. ಜನ ಜಾನುವಾರುಗಳಿಗೆ ಕುಡಿಯುವ ನೀರು ಅಭಾವವಾಗಿದೆ. ನಗರಪ್ರದೇಶದಲ್ಲಿನ ರೇಷ್ಮೆ ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ರೈತರಿಂದ ಅಕ್ರಮ ಸಕ್ರಮದಲ್ಲಿ 18 ಸಾವಿರ ರೂಗಳನ್ನು ಕಟ್ಟಿಸಿಕೊಂಡು ಒಂದು ವರ್ಷವಾದರೂ ವಿದ್ಯುತ್ ಪರಿವರ್ತಕಗಳನ್ನು ಹಾಕಿಲ್ಲ. ರೈತರು ಸಾಲ ಮಾಡಿ ಕೊಳವೆ ಬಾವಿಗಳನ್ನು ಕೊರೆಸಿ ಇಲಾಖೆಯ ವಿದ್ಯುತ್ ಪರಿವರ್ತಕಗಳಿಗೆ ಕಾಯುವಂತಾಗಿದೆ. ರೈತರ ಸಭೆಯನ್ನು ಅಧಿಕಾರಿಗಳು ಆಯೋಜಿಸಿಲ್ಲ. ತಕ್ಷಣ ಅಧಿಕಾರಿಗಳು ವಿದ್ಯುತ್ ಸಮಸ್ಯೆಯನ್ನು ಬಗೆ ಹರಿಸದಿದ್ದಲ್ಲಿ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಮಾನ ಮನಸ್ಕರ ಹೋರಾಟ ಸಮಿತಿ ಹಾಗೂ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಸದಸ್ಯರು ಮನವಿ ಪತ್ರಗಳನ್ನು ಎ.ಇ.ಇ ಪರಮೇಶ್ವರಪ್ಪ ಅವರಿಗೆ ಸಲ್ಲಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರವಿಪ್ರಕಾಶ್, ಪ್ರತೀಶ್, ಸಮಾನ ಮನಸ್ಕರ ಹೋರಾಟ ಸಮಿತಿ ತಾಲ್ಲೂಕು ಅಧ್ಯಕ್ಷ ಜೆ.ಎಸ್.ವೆಂಕಟಸ್ವಾಮಿ, ಜಿ.ಎಸ್.ಅಕ್ರಂ ಪಾಷ, ಇಮ್ತಿಯಾಜ್ಪಾಷ, ರಹಮತ್ಪಾಷ, ಆರ್.ಪುರುಷೋತ್ತಮ್, ದೇವರಾಜ್, ಮಾರಪ್ಪ, ಮೇಲೂರು ನಾಗರಾಜ್, ಬಾಲಮುರಳಿಕೃಷ್ಣ, ನಾರಾಯಣಸ್ವಾಮಿ, ಮುನಿಕೆಂಪಣ್ಣ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.