Home News ಬೇಜವಾಬ್ದಾರಿ ಹೇಳಿಕೆಗಳು ಜನನಾಯಕರಿಗೆ ತರವಲ್ಲ

ಬೇಜವಾಬ್ದಾರಿ ಹೇಳಿಕೆಗಳು ಜನನಾಯಕರಿಗೆ ತರವಲ್ಲ

0

ಜವಾಬ್ದಾರಿತ ಜನಪ್ರತಿನಿಧಿಗಳು ಬೇಜವಾಬ್ದಾರಿಯಿಂದ ವೇದಿಕೆಗಳಲ್ಲಿ ಇಲ್ಲಸಲ್ಲದ ಆರೋಪಗಳನ್ನು ಮಾಡುವುದು, ಜನರಿಗೆ ತಪ್ಪು ಸಂದೇಶ ಕೊಡುವ ಹೇಳಿಕೆ ನೀಡುವುದು ತರವಲ್ಲ. ಬಾಯಿಗೆ ಬಂದಂತೆ ಮಾತಾಡುವುದು ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕರಿಗೆ ಶೋಭೆ ತರುವುದಿಲ್ಲ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ನೆಹರು ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಬೃಹತ್ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಮತ್ತು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಕ್ಷೇತ್ರದ ಶಾಸಕರ ಬಗ್ಗೆ ಹಗುರವಾಗಿ ಮಾತನಾಡಿದ್ದನ್ನು ಖಂಡಿಸಿ ಶನಿವಾರ ಸುದ್ದಿಘೋಷ್ಠಿ ನಡೆಸಿ ಅವರು ಮಾತನಾಡಿದರು.
‘ಕ್ಷೇತ್ರದಲ್ಲಿ ಕಳೆದ ಭಾರಿ ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸಿದ್ದರೆ ವಿಧಾನಸೌಧದ ಮೂರನೇ ಅಂತಸ್ತಿನಲ್ಲಿ ಸಚಿವರಾಗಿ ಅಧಿಕಾರ ನಡೆಸುತ್ತಿದ್ದರು. ಕ್ಷೇತ್ರದ ಅಭಿವೃದ್ಧಿಯಾಗುತ್ತಿತ್ತು. ಕ್ಷೇತ್ರದ ಅಭಿವೃದ್ಧಿಯನ್ನು ನೀವೇ ನಿಮ್ಮ ಕೈಯ್ಯಾರೆ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಕಳೆದುಕೊಂಡಿದ್ದೀರಿ’ ಎಂಬ ಜಿ.ಪರಮೇಶ್ವರ್ ಮಾತಿಗೆ ಉತ್ತರಿಸಿ, ಕಳೆದ ಮೂವತ್ತು ವರ್ಷಗಳಿಂದ ಕ್ಷೇತ್ರವನ್ನು ಪ್ರತಿನಿಧಿಸಿ ೫ ಭಾರಿ ಶಾಸಕರಾಗಿ ೩ ಭಾರಿ ಸಚಿವರಾಗಿ ಅಧಿಕಾರ ಅನುಭವಿಸಿದ ತಮ್ಮ ಪಕ್ಷದ ಅಭ್ಯರ್ಥಿ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಯಾಕೆ ಆಲೋಚನೆ ಮಾಡಲಿಲ್ಲ. ತಮ್ಮ ಪಕ್ಷದ ಅಭ್ಯರ್ಥಿ ಕ್ಷೇತ್ರದ ಅಭಿವೃದ್ಧಿಗಾಗಿ ದುಡಿಯಲಿಲ್ಲ ಎಂಬ ಕಾರಣಕ್ಕೆ ಕ್ಷೇತ್ರದ ಜನರು ನನ್ನನ್ನು ಸುಮಾರು ೧೬ ಸಾವಿರ ಮತಗಳ ಅಂತರದಿಂದ ಆಯ್ಕೆ ಮಾಡಿದ್ದಾರೆ.
ನಾನು ಪ್ರತಿನಿತ್ಯ ನನ್ನ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಚಿಂತಿಸುವ ಜೊತೆಗೆ ಶಾಸಕನಾಗಿ ಆಯ್ಕೆ ಆದ ನಂತರ ಕ್ಷೇತ್ರದಲ್ಲಿ ನಾನು ಸುಸಜ್ಜಿತ ನ್ಯಾಯಾಲಯ ಸಂಕೀರ್ಣ, ಕೆಎಸ್ಆರ್ಟಿಸಿ ಡಿಪೋ, ಅಗ್ನಿಶಾಮಕ ದಳ, ತಾಲ್ಲೂಕಿನಾಧ್ಯಂತ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಐಟಿಐ ಕಾಲೇಜು, ಕ್ಷೇತ್ರದಾದ್ಯಂತ ಉತ್ತಮ ರಸ್ತೆ, ಕುಡಿಯುವ ನೀರಿನ ಘಟಕಗಳ ನಿರ್ಮಾಣ ಮಾಡಲು ಶ್ರಮಿಸಿದ್ದೇನೆ.
‘ಇನ್ನು ಕ್ಷೇತ್ರದ ಜೆಡಿಎಸ್ ಶಾಸಕ ಕಳೆದ ನಾಲ್ಕೂವರೆ ವರ್ಷದ ಅವಧಿಯಲ್ಲಿ ಸದನದಲ್ಲಿ ಯಾವುದೇ ಪ್ರಶ್ನೆ ಕೇಳಿಲ್ಲ ಬದಲಿಗೆ ಟಿಎ, ಡಿಎ ಗಾಗಿ ಹೋಗುತ್ತಾರೆ’ ಎಂದು ಆರೋಪಿಸಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮಾತಿಗೆ ಉತ್ತರಿಸಿ, ವಿಧಾನಸೌಧ ಕಲಿಕಾ ಕೇಂದ್ರವಾಗಿದೆ. ನಾನು ವಿಧಾನಸೌಧಕ್ಕೆ ಕೇವಲ ಟಿಎ ಡಿಎ ಗಾಗಿ ಹೋಗುವುದಿಲ್ಲ ಸ್ವಾಮಿ, ಬದಲಿಗೆ ನಾನು ನನ್ನ ಕ್ಷೇತ್ರಕ್ಕೆ ಏನಾದರೂ ಮಾಡಬೇಕು ಎಂಬ ಉದ್ದೇಶದಿಂದ ಹೋಗುತ್ತೇನೆ. ಸ್ವಾಮಿ ತಾವು ಹಿರಿಯರು, ಬಲಾಢ್ಯರೂ ಇರಬಹುದು ಆದರೆ ತಾವು ಸಹ ನನ್ನಂತೆಯೇ ಓರ್ವ ಶಾಸಕನಾಗಿ ಆಯ್ಕೆಯಾಗಿರುವವರು. ಹಾಗಾಗಿ ಮತ್ತೊಬ್ಬ ಶಾಸಕರ ಬಗ್ಗೆ ಹಗುರವಾಗಿ ಮಾತಾಡುವುದು ನಿಮಗೂ ನಿಮ್ಮ ಪಕ್ಷಕ್ಕೂ ಶೋಭೆ ತರುವುದಿಲ್ಲ ಎಂದರು.
ಕ್ಷೇತ್ರದ ಶಾಸಕನಾಗಿ ನಾನು ಆಯ್ಕೆಯಾದ ಕಳೆದ ನಾಲ್ಕೂವರೆ ವರ್ಷದ ಅವಧಿಯಲ್ಲಿ ನಡೆದಿರುವ ಅಭಿವೃದ್ಧಿ ಕೆಲಸ ಕಾರ್ಯಗಳ ಬಗ್ಗೆ ದಾಖಲೆ ಸಮೇತ ನೀಡುತ್ತೇನೆ. ನಿಮ್ಮ ಪಕ್ಷದ ಅಭ್ಯರ್ಥಿ ಕಳೆದ ಮೂವತ್ತು ವರ್ಷಗಳಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ದಾಖಲೆ ಬಿಡುಗಡೆ ಮಾಡಿ ಎಂದು ಸವಾಲು ಹಾಕಿದರು.
ಕಳೆದ ಮೂವತ್ತು ವರ್ಷಗಳಿಂದ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸಿ ೫ ಭಾರಿ ಶಾಸಕರಾಗಿ ೩ ಭಾರಿ ಸಚಿವರಾಗಿ ಅಧಿಕಾರ ಅನುಭವಿಸಿದಾಗ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಏಕೆ ಆಲೋಚನೆ ಮಾಡಲಿಲ್ಲ. ಕ್ಷೇತ್ರದಲ್ಲಿ ಅಗ್ನಿಶಾಮಕ ದಳ, ಕೆಎಸ್ಆರ್ಟಿಸಿ ಡಿಪೋ ನಿರ್ಮಾಣ ಮಾಡಲು ಇದೇ ಎಂ.ರಾಜಣ್ಣ ಶಾಸಕನಾಗಿ ಬರಬೇಕಾಗಿತ್ತಾ, ನಿಮ್ಮ ಪಕ್ಷದ ಅಭ್ಯರ್ಥಿಯ ಅಧಿಕಾರಾವಧಿಯಲ್ಲಿ ಅಭಿವೃದ್ಧಿ ಕೆಲಸ ಮಾಡಲಿಲ್ಲ ಎಂಬ ಕಾರಣಕ್ಕೆ ಕಳೆದ ಚುನಾವಣೆಯಲ್ಲಿ ತಮ್ಮನ್ನು ಸೋಲಿಸುವ ಮೂಲಕ ಕ್ಷೇತ್ರದ ಜನತೆ ಕಾಂಗ್ರೆಸ್ ಪಕ್ಷಕ್ಕೆ ಪಾಠ ಕಲಿಸಿದ್ದಾರೆ.
ಐದು ವರ್ಷಕ್ಕೊಮ್ಮೆ ರಾಜ್ಯ ನಾಯಕರು ಸೇರಿದಂತೆ ವಿವಿಧ ಮುಖಂಡರನ್ನು ಕರೆಯಿಸಿ ಇಲ್ಲ ಸಲ್ಲದ್ದನ್ನು ವೇದಿಕೆಗಳಲ್ಲಿ ಮಾತಾಡಿಸಿದ ಮಾತ್ರಕ್ಕೆ ಕ್ಷೇತ್ರದ ಜನತೆ ತಮ್ಮನ್ನು ಆಶೀರ್ವದಿಸುವುದಿಲ್ಲ. ಕ್ಷೇತ್ರದ ಜನತೆಗೆ ಪ್ರತಿಯೊಬ್ಬರ ಬಗ್ಗೆಯೂ ಗೊತ್ತಿದೆ ಯಾರನ್ನು ಆಯ್ಕೆ ಮಾಡಬೇಕು ಅಥವ ಬೇಡ ಎನ್ನುವುದನ್ನು ಅವರೇ ನಿರ್ಧರಿಸುತ್ತಾರೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಅಫ್ಸರ್ಪಾಷ, ಮುಖಂಡರಾದ ಕೆ.ಎಸ್.ಕನಕಪ್ರಸಾದ್, ಲಕ್ಮಿನಾರಾಯಣ(ಲಚ್ಚಿ) ಹಾಜರಿದ್ದರು.