ಬೆಳೆದ ಬೆಳೆಯ ಮೌಲ್ಯವರ್ಧನೆಯಾಗುವುದು ಅದನ್ನು ಸಂಸ್ಕರಿಸಿದಾಗಲೇ. ತಮ್ಮ ಹೊಲದಲ್ಲಿ ಬೆಳೆಯುವ ಕಿರುಧಾನ್ಯಗಳನ್ನು ಸಂಸ್ಕರಿಸಿ ಪುಡಿ ಮಾಡಿ ಹಾಲು ಅಥವಾ ನೀರಿನೊಂದಿಗೆ ಬೆರೆಸಿ ಕುಡಿಯಬಹುದಾದ ಪೌಷ್ಟಿಕಾಂಶದ ಪುಡಿಯನ್ನಾಗಿಸುತ್ತಿದ್ದಾರೆ ಶಿಡ್ಲಘಟ್ಟ ತಾಲ್ಲೂಕಿನ ಬೋದಗೂರು ಮಾಣಿಕ್ಯಮ್ಮ.
ತಾಲ್ಲೂಕಿನ ಬೋದಗೂರು ಗ್ರಾಮದ ಸಾವಯವ ಕೃಷಿಕರಾದ ವೆಂಕಟಸ್ವಾಮಿರೆಡ್ಡಿ ಅವರು ಸಜ್ಜೆ, ಸಾಮೆ, ಊದಲು, ಬರಗು, ನವಣೆ, ಬಿಳಿ ಜೋಳ, ಹಾರಕ, ರಾಗಿ, ಉಚ್ಚೆಳ್ಳು ಮುಂತಾದ ತೃಣ ಧಾನ್ಯಗಳೊಂದಿಗೆ ಮಳೆಯಾಶ್ರಿತ ನಾಟಿ ತಳಿ ದೊಡ್ಡಬೈರನೆಲ್ಲು ಭತ್ತವನ್ನು ಬೆಳೆಯುತ್ತಾರೆ. ತಮ್ಮ ಕುಟುಂಬಕ್ಕೆ ಬಳಸಿ ಉಳಿದಿದ್ದನ್ನು ಆಸಕ್ತ ರೈತರಿಗೆ ಬೀಜದ ರೂಪದಲ್ಲಿ ನೀಡುತ್ತಾರೆ. ಆರ್ಥಿಕ ಉದ್ದೇಶವಿಲ್ಲದೇ ಕೇವಲ ಆಹಾರ, ಆರೋಗ್ಯ ಮತ್ತು ಧಾನ್ಯ ಪಸರಣದ ಉದ್ದೇಶದಿಂದ ಅರ್ಧ ಎಕರೆಯಲ್ಲಿ ಸಜ್ಜೆ, ಸಾಮೆ, ನವಣೆ, ಬಿಳಿ ಜೋಳ, ಉಚ್ಚೆಳ್ಳು, ಊದಲು, ಸಾಮೆ, ಬರಗು, ನಾಟಿ ತಳಿ ಭತ್ತವನ್ನು ಬೆಳೆಯುತ್ತಾರೆ. ಯಾವುದೇ ರೀತಿಯ ರಾಸಾಯನಿಕಗಳನ್ನು ತಮ್ಮ ನೆಲಕ್ಕೆ ಸೋಕಿಸದಿರುವುದು ಅವರ ವಿಶೇಷತೆ.
ಕಿರುಧಾನ್ಯಗಳು ಸಾಮಾನ್ಯವಾಗಿ ಗುಂಡಗಿನ ಆಕಾರದಲ್ಲಿ ಮತ್ತು ಸಣ್ಣ ಗಾತ್ರದಲ್ಲಿ ಇರುತ್ತವೆ. ನವಣೆ, ಸಾಮೆ, ಸಜ್ಜೆ, ಹಾರಕ, ಕೊರಲೆ, ಬರಗು, ರಾಗಿ, ಜೋಳದಂತಹ ಬೆಳೆಗಳು ಕಿರು ಧಾನ್ಯಗಳು. ಎಲ್ಲ ಹವಾಮಾನಕ್ಕೂ ಹೊಂದಿಕೊಂಡು ಬೆಳೆಯುವ, ಹೆಚ್ಚು ಪೌಷ್ಟಿಕಾಂಶಗಳನ್ನು, ನಾರಿನಂಶವನ್ನು ಹೊಂದಿರುವ ನಿಸರ್ಗಕ್ಕೆ ಹಾನಿ ಮಾಡದಂತೆ ಬೆಳೆಯುವ ಈ ಧಾನ್ಯಗಳನ್ನು ಸಿರಿಧಾನ್ಯಗಳೆಂದು ಕೂಡ ಕರೆಯುತ್ತಾರೆ. ಇವನ್ನು ತೃಣಧಾನ್ಯಗಳು ಎಂದೂ ಕೂಡ ಕರೆಯುತ್ತಾರೆ.
ಬೋದಗೂರು ಮಾಣಿಕ್ಯಮ್ಮ ಅವರು ತಮ್ಮ ಹೊಲದಲ್ಲಿ ಬೆಳೆಯುವ ಸಿರಿಧಾನ್ಯಗಳು, ಬೇಳೆಗಳು, ಏಲಕ್ಕಿ ಗೋಡಂಬಿ, ಬಾದಾಮಿ ಎಲ್ಲವುಗಳ ಪುಡಿಗಳ ಮಿಶ್ರಣವನ್ನು ಪ್ಯಾಕೆಟ್‌ಗಳಾಗಿ ಮಾಡುತ್ತಾರೆ. ನಗರದಲ್ಲಿರುವ ಮಕ್ಕಳಿಗೆ, ಮೊಮ್ಮಕ್ಕಳಿಗೆ, ವಿದೇಶದಲ್ಲಿರುವ ಅವರ ಬಂಧುಗಳಿಂದ ಅಪಾರ ಬೇಡಿಕೆ. ತಮ್ಮ ಆರೋಗ್ಯದೊಂದಿಗೆ ತಮ್ಮ ಬಂಧುಗಳ ಆರೋಗ್ಯ ಉತ್ತಮಗೊಳ್ಳಲು ಅವರು ಈ ರೀತಿಯಾಗಿ ನೆರವಾಗುತ್ತಿದ್ದಾರೆ. ನಗರಗಳಲ್ಲಿ ಸಾವಯವ ಉತ್ಪನ್ನಗಳು ಹಾಗೂ ಸಿರಿಧಾನ್ಯಗಳ ಉತ್ಪನ್ನಗಳು ಬೇಡಿಕೆಯಿರುವ ಮಾರಾಟದ ವಸ್ತುಗಳಾಗಿರುವಾಗ ಇವರು ಹಣದ ಆಸೆಯಿಲ್ಲದೇ ಉತ್ತಮ ಆರೋಗ್ಯ ಹಾಗೂ ಪೌಷ್ಟಿಕಾಂಶಗಳ ಹಂಚಿಕೆಯ ಉದ್ದೇಶವನ್ನು ಹೊಂದಿರುವುದು ವಿಶೇಷವಾಗಿದೆ. ಬೋದಗೂರಿನ ರಾಘವೇಂದ್ರ ಮಹಿಳಾ ಸ್ವಸಹಾಯ ಗುಂಪಿನ ಪ್ರತಿನಿಧಿಯಾಗಿರುವ ಇವರು ಉಳಿದ ಮಹಿಳೆಯರಿಗೂ ಸಿರಿ ಧಾನ್ಯಗಳ ರುಚಿ ಹತ್ತಿಸಿದ್ದಾರೆ.
‘ನಮ್ಮ ಹೊಲದಲ್ಲಿ ಬೆಳೆಯುವ ಕಿರುಧಾನ್ಯಗಳಾದ ಹಾರಕ, ಸಾಮೆ, ಊದಲು, ಬರುಗು, ನವಣೆ, ಸಜ್ಜೆ, ಬಿಳಿ ಜೋಳ, ರಾಗಿ, ಕೆಂಪಕ್ಕಿಗಳನ್ನು ತಲಾ ಐದು ಕೆಜಿ, ತೊಗರಿ ಬೇಳೆ, ಕಡಲೇಬೇಳೆ, ಕಡಲೆಕಾಯಿ ಬೀಜಗಳನ್ನು ತಲಾ ಎರಡು ಕೆಜಿ, ಗೋದಿ ಐದು ಕೆಜಿ, ಏಲಕ್ಕಿ ಕಾಲು ಕೆಜಿ, ಗೋಡಂಬಿ ಮತ್ತು ಬಾದಾಮಿ ಅರ್ಧರ್ಧ ಕೆಜಿ ಪುಡಿ ಮಾಡಿಸುತ್ತೇನೆ. ರಾಗಿ ಮತ್ತು ಹೆಸರುಕಾಳುಗಳನ್ನು ಮೊಳಕೆ ಕಟ್ಟಿಸಿ ಒಣಗಿಸಿದರೆ, ಸಿರಿಧಾನ್ಯಗಳು ಮತ್ತು ಬೇಳೆಗಳನ್ನು ಹುರಿಯುತ್ತೇವೆ. ಮೊದಲು ಮನೆ ಮಟ್ಟಿಗೆ ಮಾಡಿದ್ದು, ಈಗ ಬಂಧು, ಮಿತ್ರರಿಂದೆಲ್ಲ ಬೇಡಿಕೆ ಬರುತ್ತಿದೆ. ನಮಗಂತೂ ಕೊಡಲು ಖುಷಿಯಿದೆ’ ಎನ್ನುತ್ತಾರೆ ಬೋದಗೂರು ಮಾಣಿಕ್ಯಮ್ಮ.
‘ಕಿರುಧಾನ್ಯಗಳಲ್ಲಿ ಎಲ್ಲ ಪೋಷಕಾಂಶಗಳನ್ನು ಒಟ್ಟಿಗೆ ನೀಡುವ ತಾಕತ್ತಿದೆ. ಹಿಂದೆ ಈ ಧಾನ್ಯಗಳಿಂದ ಭೀಮ ಬಲ ಬರುತ್ತದೆಂದು ನಂಬಿಕೆಯಿಂದ ದೇಹಧಾರ್ಡ್ಯ ಪಟುಗಳು ಕಿರುಧಾನ್ಯಗಳನ್ನು ಹೆಚ್ಚಾಗಿ ಬಳಸುತ್ತಿದ್ದರು ಮತ್ತು ಎಳೆ ಮಕ್ಕಳಿಗೆ ಇವುಗಳ ಮಿಶ್ರಣದ ಪುಡಿಯ ಪೇಯವನ್ನು ನೀಡುತ್ತಿದ್ದರು. ಅದೇ ಆಧಾರದ ಮೇಲೆ ಪುಡಿಯನ್ನು ತಯಾರಿಸುತ್ತೇನೆ. ಮಕ್ಕಳಿಗೆ, ಮಧುಮೇಹಿಗಳಿಗೆ, ವೃದ್ಧರಿಗೆ ಸೇರಿದಂತೆ ಎಲ್ಲರಿಗೂ ಇದು ಉತೃಷ್ಟ ಪೇಯವಾಗುತ್ತದೆ’ ಎಂದು ಅವರು ವಿವರಿಸಿದರು.