Home News ಬೌದ್ಧಿಕ ಪ್ರತಿಭೆ ಅನಾವರಣಕ್ಕೆ ವೇದಿಕೆ

ಬೌದ್ಧಿಕ ಪ್ರತಿಭೆ ಅನಾವರಣಕ್ಕೆ ವೇದಿಕೆ

0

ಪ್ರತಿಭಾ ಕಾರಂಜಿಯು ವಿದ್ಯಾರ್ಥಿಗಳ ಬೌದ್ಧಿಕ ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆಯಾಗಿ ರೂಪುಗೊಂಡಿದೆ ಎಂದು ಶಾಸಕ ಎಂ ರಾಜಣ್ಣ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಗುರುವಾರ ನಡೆದ ತಾಲ್ಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಶಿಸಿ ಹೋಗುತ್ತಿರುವ ನಾಡಿನ ಸಾಂಸ್ಕೃತಿಕ, ಜಾನಪದ ಕಲೆಗಳ ಬಗ್ಗೆ ವಿದ್ಯಾರ್ಥಿಗಳು ಆಸಕ್ತಿ ವಹಿಸಿ, ಅಧ್ಯಯನ, ಅಭ್ಯಾಸಗಳ ಮೂಲಕ ಸ್ಪರ್ಧಾ ವೇದಿಕೆಗಳಲ್ಲಿ ಪ್ರತಿಭೆ ಅನಾವರಣಗೊಳಿಸುತ್ತಿರುವುದು ಉತ್ತಮ ಬೆಳವಣಿಗೆ. ಸಂಗೀತ, ಜಾನಪದ ಗೀತೆ, ಕೋಲಾಟ ಮುಂತಾದ ಕಲೆಯಲ್ಲಿ ಮಕ್ಕಳು ಹೊಂದಿರುವ ಅಭಿರುಚಿಗೆ ತಕ್ಕಂತೆ ಉತ್ತಮ ವೇದಿಕೆ ಒದಗಿಸಿಕೊಡುವ ಉದ್ದೇಶದಿಂದ ಕ್ಲಸ್ಟರ್, ತಾಲ್ಲೂಕು, ಜಿಲ್ಲಾ, ರಾಜ್ಯ ಮಟ್ಟದಲ್ಲಿ ಪ್ರತಿಭಾ ಕಾರಂಜಿ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಅವಕಾಶವನ್ನು ಸದುಪಯೋಗಪಡಿಸಿಕೊಂಡು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕಲಾವಿದರಾಗಿ ಹೊರಹೊಮ್ಮಲಿ ಎಂದರು.

ಶಿಡ್ಲಘಟ್ಟದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಗುರುವಾರ ನಡೆದ ತಾಲ್ಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿಯಲ್ಲಿ ಮಣ್ಣಿನ ಮೊಸಳೆ ತಯಾರಿಕೆಯಲ್ಲಿ ತೊಡಗಿರುವ ವಿದ್ಯಾರ್ಥಿ.
ಶಿಡ್ಲಘಟ್ಟದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಗುರುವಾರ ನಡೆದ ತಾಲ್ಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿಯಲ್ಲಿ ಮಣ್ಣಿನ ಮೊಸಳೆ ತಯಾರಿಕೆಯಲ್ಲಿ ತೊಡಗಿರುವ ವಿದ್ಯಾರ್ಥಿ.

ತಾಲ್ಲೂಕು ಪಂಚಾಯತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ ಮಾತನಾಡಿ, ಮಕ್ಕಳಲ್ಲಿನ ಸುಪ್ತ ಪ್ರತಿಭೆ ಗುರುತಿಸಿ ಎಲ್ಲಾ ರೀತಿಯ ಪ್ರೋತ್ಸಾಹ ನೀಡುವ ಮೂಲಕ ಆಯಾಯ ಕ್ಷೇತ್ರದಲ್ಲಿ ನೈಪುಣ್ಯತೆ ಸಾಧಿಸಲು ಪೋಷಕರು, ಶಿಕ್ಷಕರು ಸಹಕರಿಸಬೇಕು ಎಂದು ಹೇಳಿದರು.
ಸುಮಾರು 350 ಶಾಲೆಗಳ 2500 ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡರು. ಸರ್ಕಾರಿ ಪ್ರೌಢಶಾಲೆಯ ಮೈದಾನ ಮಕ್ಕಳ ನಂದನವನವಾಗಿ ಮಾರ್ಪಟ್ಟಿತ್ತು.
ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷ ಎಚ್. ನರಸಿಂಹಯ್ಯ, ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು, ಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಸಮನ್ವಯಾಧಿಕಾರಿ ಜಿ.ಕೆ.ಸುಮ, ಶ್ರೀರಾಮಯ್ಯ, ಬಿ.ಆರ್ .ನಾರಾಯಣಸ್ವಾಮಿ, ಸಿ.ಎಂ.ಮುನಿರಾಜು, ಬೈರಾರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.