ಮಕ್ಕಳಿಗೆ ಪಠ್ಯಪುಸ್ತಕದ ಹೊರೆ ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಬ್ಯಾಗ್ ರಹಿತ ದಿನ ಎಂಬ ವಿನೂತನ ಕಾರ್ಯಕ್ರಮಕ್ಕೆ ತಾಲ್ಲೂಕಿನ ಎಲ್ಲಾ ಸರ್ಕಾರಿ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶನಿವಾರ ಚಾಲನೆ ನೀಡಲಾಯಿತು. ಸರ್ಕಾರಿ ಶಾಲೆಗಳಲ್ಲಿ ವಿವಿಧ ರೀತಿಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.
‘ಪ್ರತಿ ತಿಂಗಳು ಎರಡನೇ ಮತ್ತು ನಾಲ್ಕನೇ ಶನಿವಾರ ಬ್ಯಾಗ್ ತರದೇ ಮಕ್ಕಳು ಶಾಲೆಗೆ ಬರುವಂತೆ ಸೂಚನೆ ನೀಡಲಾಗಿದೆ. ಮಕ್ಕಳಿಗೆ ಆ ದಿನ ಪಾಠದ ಬದಲಿಗೆ ಸೃಜನಶೀಲ ಚಟುವಟಿಕೆಗಳನ್ನು ಹಮ್ಮಿಕೊಂಡು ಕಲಿಕೆಯನ್ನು ಜೀವನ್ಮುಖಿಯಾಗಿರಿಸಲು ಉದ್ದೇಶಿಸಲಾಗಿದೆ. ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಹೊರತರಲು ಮತ್ತು ವ್ಯಕ್ತಿತ್ವ ವಿಕಸನಕ್ಕೆ ಅವಕಾಶ ಕಲ್ಪಿಸುವುದು ಇದರ ಮೂಲ ಉದ್ದೇಶ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಬಾಬು ತಿಳಿಸಿದ್ದಾರೆ.
ಕಥೆ ಹೇಳಿದ ಮಕ್ಕಳು
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಕಥೆಗಳನ್ನು ಹೇಳಿಸಲಾಯಿತು. ಯೋಗ ಮಾಡಿಸಲಾಯಿತು. ತಮ್ಮ ಮಾತುಗಳಲ್ಲಿ ಹೇಳಿದ ಕಥೆಗಳನ್ನು ಬರೆಯುವ ವಿಧಾನವನ್ನು ಶಿಕ್ಷಕರು ಕಲಿಸಿದರು. ಬಣ್ಣದ ಪೇಪರನ್ನು ಬಳಸಿ ವಿವಿಧ ಕರಕುಶಲ ವಸ್ತುಗಳನ್ನು ರೂಪಿಸುವ ವಿಧಾನಗಳನ್ನು ಮಕ್ಕಳಿಗೆ ಕಲಿಸಲಾಯಿತು.
‘ಮಕ್ಕಳ ಕಲ್ಪನೆ ವಿಸ್ತರಿಸುವಂತೆ ಅವರಿಂದ ಕಥೆಗಳನ್ನು ಹೇಳಿಸಿದೆವು. ಕಥೆಗಳೆಂದರೆ ಮಕ್ಕಳಿಗೆ ಅಚ್ಚುಮೆಚ್ಚು. ಒಂದೊಂದು ಮಗುವಿನ ಆಲೋಚನೆಯೂ ವಿಭಿನ್ನ. ಪ್ರೋತ್ಸಾಹಿಸಿದಾಗ ಅವರು ಹೇಳುವ ಕಥೆಗಳು ಅಚ್ಚರಿಯನ್ನುಂಟು ಮಾಡಿತು. ಎಲ್ಲಾ ಮಕ್ಕಳೂ ಕಥೆ ಹೇಳುವುದರಲ್ಲಿ ನಾ ಮುಂದು ತಾ ಮುಂದು ಎಂದು ಭಾಗವಹಿಸಿದರು’ ಎಂದು ಶಿಕ್ಷಕ ಚಾಂದ್‌ಪಾಷ ತಿಳಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್, ಪಿಡಿಒ ಅಂಜನ್‌ಕುಮಾರ್, ಅಧಿಕಾರಿ ಮೋಹನ್, ಶಿಕ್ಷಕರಾದ ಭಾರತಿ, ಅಶೋಕ್ ಸಿಬ್ಬಂಧಿ ವೆಂಕಟಮ್ಮ ಹಾಜರಿದ್ದರು.
ಕಥೆ ಪುಸ್ತಕ ಓದಿದ ಮಕ್ಕಳು
ತಾಲ್ಲೂಕಿನ ತಾತಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯ ಗ್ರಂಥಾಲಯದಲ್ಲಿರುವ ಕಥೆ ಪುಸ್ತಕಗಳನ್ನು ಮಕ್ಕಳಿಗೆ ನೀಡಿ ಓದಿಸಲಾಯಿತು. ಯೋಗ, ಧ್ಯಾನ, ಆಟಗಳಲ್ಲಿ ಮಕ್ಕಳು ತೊಡಗಿಸಿಕೊಂಡರು.
ಅಬ್ಲೂಡು ಗ್ರಾಮ ಪಂಚಾಯಿತಿ ಪಿಡಿಒ ಜಯಶ್ರೀ, ಮುಖ್ಯ ಶಿಕ್ಷಕಿ ಸರಸ್ವತನ್ನ, ಶಿಕ್ಷಕರಾದ ಎಂ.ದೇವರಾಜ್, ಡಿ.ಎಸ್.ಶ್ರೀಕಾಂತ್, ಎಚ್.ಆರ್.ಮಂಜುನಾಥ್, ಕೆ.ಶ್ರೀನಿವಾಸ ಯಾದವ್, ಕೆ.ನಾಗರಾಜ್, ಎ.ತ್ರಿವೇಣಿ ಹಾಜರಿದ್ದರು.
ಭಾಷಣ ಮಾಡಿದ ಮಕ್ಕಳು
ಸಿಆರ್‌ಪಿ ಶ್ರೀನಿವಾಸರೆಡ್ಡಿ, ಎಸ್‌ಡಿಎಂಸಿ ಅಧ್ಯಕ್ಷ ಜಯರಾಮ್, ಸದಸ್ಯ ಗಂಗಾಧರ್, ಮುಖ್ಯ ಶಿಕ್ಷಕ ಗೋಪಾಲಕೃಷ್ಣಯ್ಯ, ಶಿಕ್ಷಕರಾದ ಎಲ್.ನಾಗಭೂಷಣ್, ಎಂ.ಎ.ರಾಮಕೃಷ್ಣಪ್ಪ, ಗಂಗಶಿವಪ್ಪ ಹಾಜರಿದ್ದರು.